ರಾಜ್ಯ

ಬೆಂಗಳೂರು: ವಲಸೆ ಕಾರ್ಮಿಕ ಮಹಿಳೆಯ, ಮಗುವಿನ ಜೀವ ಉಳಿಸಿದ ದಂತವೈದ್ಯೆ, ಸಾಮಾಜಿಕ ತಾಣದಲ್ಲಿ ಮೆಚ್ಚುಗೆ

Raghavendra Adiga

ಬೆಂಗಳುರು: ಬೆಂಗಳೂರಿನ ದಂತವೈದ್ಯೆಯೊಬ್ಬರು ವಲಸೆ ಕಾರ್ಮಿಕ ಮಹಿಳೆಯ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗುವಿನ ಜೀವ ರಕ್ಷಿಸಿರುವ ಘಟನೆ ಇತ್ತೀಚೆಗೆ ವರದಿಯಾಗಿದೆ.

ಏಪ್ರಿಲ್ 14ರ ಬೆಳಿಗ್ಗೆ ನಡೆದ ಘಟನೆಯಲ್ಲಿ ದೊಡ್ಡ ಬೊಮ್ಮಸಂದ್ರದಲ್ಲಿ ದಂತ ಚಿಕಿತ್ಸಾಲಯವನ್ನು ನಡೆಸುತ್ತಿರುವ ರಮ್ಯಾ ಹಿಮಾನಿಶ್  ಕಾರ್ಮಿಕ ಮಹಿಳೆಗೆ ನೆರವಾಗಿ ಸಾಮಾಜಿಕ ತಾಣದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಉತ್ತರ ಭಾರತದಿಂದ ಬಂದ ವಲಸೆ ಕಾರ್ಮಿಕಳಾದ  ಶಾಂತಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆ ಹುಡುಕುತ್ತಾ  ಏಳು ಕಿಲೋಮೀಟರ್ ನಡೆದು ಬಂದಿದಾಳೆ. ಬೆಳಿಗ್ಗೆ ದಂತವೈದ್ಯೆಯ ಕ್ಲಿನಿಕ್ ಇನ್ನೂ ತೆರೆದಿರದ ವೇಳೆ ಕ್ಲಿನಿಕ್ ಪಕ್ಕದ ಪಾದಚಾರಿ ಮಾರ್ಗದಲ್ಲಿ, ಕುಳಿತಾಗಲೇ ಹೆರಿಗೆಬೇನೆ ಕಾಣಿಸಿದೆ. ಅಲ್ಲೇ ಹೆರಿಗೆ ಕೂಡ ಆಗಿದ್ದು ಮಗುವಿನಿಂದ ಯಾವ ಪ್ರತಿಕ್ರಿಯೆ ಬರದ ಕಾರಣ ಮಗು ಸತ್ತಿರಬಹುದೆಂದು ಭಾವಿಸಿ ಪೇಪರ್ ಒಂದರಲ್ಲಿ ಸುತ್ತಿದ್ದಾಳೆ.

ಆದರೆ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಮಹಿಳೆಯಲ್ಲಿ ರಕ್ತಸ್ರಾವವಾಗುತ್ತಿದ್ದದ್ದನ್ನು ಗಮನಿಸಿದ  ದಂತವೈದ್ಯೆ ತಕ್ಷಣ ಅವಳನ್ನು ಕ್ಲಿನಿಕ್ ಗೆ ಕರೆದೊಯ್ದು ಪರೀಕ್ಷಿಸಿದ್ದಾರೆ."ನಾನು ಅಲ್ಲಿಗೆ ಹೋದಾಗ, ಮಹಿಳೆ ರಕ್ತಸ್ರಾವವಾಗುತ್ತಿತ್ತು.. ನಾನು ಅವಳನ್ನು ಒಳಗೆ ಕರೆತಂದು ಚಿಕಿತ್ಸೆ ನೀಡಿದ್ದೇನೆ. ನಂತರ ನಾನು ಮಗುವನ್ನು ಪರೀಕ್ಷಿಸಿದೆ ಮಗುವನ್ನು ಪುನಃಚೇತನಗೊಳಿಸುವ ಕ್ರಿಯೆ ನಡೆಸಿದೆ. ಆಗ ಮಗು ಚಲಿಸಿದೆ, ಪ್ರತಿಕ್ರಯಿಸಿದೆ. "  ಡಾ ಹಿಮಾನಿಶ್ ಪಿಟಿಐಗೆ ತಿಳಿಸಿದರು.

ನಂತರ ವೈದ್ಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ನವಜಾತ ಶಿಶುವಿನೊಂದಿಗೆ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು.

SCROLL FOR NEXT