ರಾಜ್ಯ

ಚಾಮರಾಜನಗರ: ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆ ರಕ್ಷಣೆ

Nagaraja AB

ಚಾಮರಾಜನಗರ: ಮೇವು ನೀರು ಹರಸಿ ಕಾಡಿನಿಂದ ಅರಣ್ಯದಂಚಿನ ಜಮೀನಿಗೆ ಬಂದು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ವಲಯದ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹಾದೇಶ್ವರಸ್ವಾಮಿ ವನ್ಯ ಜೀವಿ ಧಾಮದ ವಲಯದ ವ್ಯಾಪ್ತಿಯಲ್ಲಿ ಬರುವ ಚೆನ್ನೇಗೌಡನದೊಡ್ಡಿ ಗ್ರಾಮದ ಗೋವಿಂದ ಎಂಬುವವರ ಜಮೀನಿನಲ್ಲಿದ್ದ ತೆರೆದ ಬಾವಿಗೆ ಹತ್ತದಿನೈದು ವರ್ಷದ ಆಸುಪಾಸಿನ ಗಂಡಾನೆಯೊಂದು ನೀರು ಕುಡಿಯಲು ಬಂದು ಬುಧವಾರ ರಾತ್ರಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದೆ.

 ಇಂದು ಬೆಳಗ್ಗೆ ಮಾಲೀಕ ಗೋವಿಂದ ಜಮೀನಿಗೆ ತೆರಳಿ ಆಕಸ್ಮಿಕವಾಗಿ ಬಾವಿಯನ್ನು ವೀಕ್ಷಿಸಿದಾಗ ನೀರಿನಲ್ಲಿ ಬಿದ್ದಿರುವ ಗಂಡಾನೆಯು ಮೇಲೆ ಬರಲು ಹರಸಾಹಸಪಡುತ್ತಿತ್ತು. ಇದನ್ನರಿತ ಗೋವಿಂದ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಹಾಗೂ ತಂಡ ಜೆಸಿಬಿ ಯಂತ್ರದ ಮೂಲಕ ಸ್ಥಳಕ್ಕಾಗಮಿಸಿ, ಆನೆ ಮೇಲೆ ಬರಲು ಜೆಸಿಬಿ ಯಂತ್ರದ ಮೂಲಕ ದಾರಿ ಮಾಡಿಕೊಟ್ಟಿದ್ದಾರೆ. 

ಬದುಕಿತು ಬಡಜೀವವೆ ಎಂಬಂತೆ ಆನೆ ಕೊನೆಗೂ ಪ್ರಯಾಸ ಪಟ್ಟು ಅರಣ್ಯ ಇಲಾಖಾಧಿಕಾರಿಗಳು ಆನೆ ಮೇಲೆರಲು ಮಾಡಿದ ದಾರಿಯಲ್ಲಿ ಪ್ರಯಾಸಪಟ್ಟು ಮೇಲಕ್ಕೇರಿ ಕಾಡಿನತ್ತ ಪ್ರಯಾಣ ಬೆಳೆಸಿತು. ಆನೆಯನ್ನು ರಕ್ಷಿಸಿದ ವಲಯಾರಣ್ಯಾಧಿಕಾರಿ ಸುಂದರ್ ಹಾಗೂ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ: ಗೂಳಿಪುರ ನಂದೀಶ. ಎಂ

SCROLL FOR NEXT