ರಾಜ್ಯ

ಸುಗ್ರೀವಾಜ್ಞೆಗೂ ಹೆದರದ ದುಷ್ಟರು: ಮಂಡ್ಯದಲ್ಲೂ ಆಶಾ ಕಾರ್ಯಕರ್ತೆಯ ಮೇಲೆ ದಾಳಿ, ಆತ್ಮಹತ್ಯೆಗೆ ಯತ್ನ!

Vishwanath S

ಮಂಡ್ಯ: ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಆದೇಶಿ ಸುಗ್ರೀವಾಜ್ಞೆ ಹೊರಡಿಸಿದ್ದರು ಇದಕ್ಕೆ ಹೆದರದ ಕೊರೋನಾ ಶಂಕಿತನೋರ್ವ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯವೆಸಗಿದ್ದು ಇದರಿಂದ ನೊಂದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಉರುಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಮೈಸೂರಿನ ಮಹದೇಶ್ವರ ನರ್ಸಿಂಗ್ ಹೋಂನಲ್ಲಿ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದವರನ್ನು ಹೋಂ ಕ್ವಾರೆಂಟೈನ್ ಮಾಡಲು ಸೂಚನೆ ನೀಡಲಾಗಿತ್ತು.

ಮಹದೇಶ್ವರ ಆಸ್ಪತ್ರೆಗೆ ತೆರಳಿದ್ದ ಉರುಳಿ ಕ್ಯಾತನಹಳ್ಳಿಯ ವ್ಯಕ್ತಿಯನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಲು ಆಶಾ ಕಾರ್ಯಕರ್ತೆಗೆ ಸೂಚಿಸಲಾಗಿತ್ತು. ಈ ಸಂಬಂಧ ಆಶಾ ಕಾರ್ಯಕರ್ತೆ ಮೀನಾಕ್ಷಿ ಎಂಬುವರು ಗ್ರಾಮಕ್ಕೆ ತೆರಳಿದ್ದಾಗ ಕೊರೋನಾ ಶಂಕಿತ ಹೋಂ ಕ್ವಾರೆಂಟೈನ್ ಗೆ ಒಳಪಡದೇ ಜಾಗೃತಿ ಮೂಡಿಸಲು ಬಂದಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. 

ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು ಇದರಿಂದ ಮನನೊಂದ ಮೀನಾಕ್ಷಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಆಶಾ ಕಾರ್ಯಕರ್ತೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ವರದಿ: ನಾಗಯ್ಯ

SCROLL FOR NEXT