ರಾಜ್ಯ

ಕಲಬುರಗಿ: ರಥೋತ್ಸವಕ್ಕೆ ಕಡಿವಾಣ ಹಾಕಲು ವಿನೂತನ ಪ್ಲಾನ್

Raghavendra Adiga

ಕಲಬುರಗಿ: ಕೊರೊನಾ ಸೋಂಕು ಸೂರ್ಯ ನಗರಿ ಕಲಬುರಗಿ‌ ಜಿಲ್ಲೆಯಲ್ಲಿ ಹೆಚ್ಚಾಳವಾಗಿದ್ದರೂ, ಲಾಕ್ ಡೌನ್ ಉಲ್ಲಂಘಿಸಿ ಅನೇಕ ಗ್ರಾಮಗಳಲ್ಲಿ ರಥೋತ್ಸವ ನೆರವೇರಿಸಿರುವ ಪ್ರಕರಣಗಳು‌ ವರದಿ ಆಗುತ್ತಲೇ ಇವೆ.

ಹೀಗಾಗಿ ಆಳಂದ ತಾಲೂಕಾ ಆಡಳಿತ ಹಾಗೂ ಪೊಲೀಸ್ ಇಲಾಖೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ‌.

ಜಿಲ್ಲೆಯ ಆಳಂದ ತಾಲೂಕಿನ ಮುನ್ನಹಳ್ಳಿ ಹಾಗೂ ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿ ರಥದ ಸುತ್ತ ಆಳವಾದ ತಗ್ಗು ತೋಡಿ ರಥೋತ್ಸವಕ್ಕೆ ಕಡಿವಾಣ ಹಾಕಲು ಮುಂಜಾಗ್ರತಾ ಕ್ರಮ ಕೈಗೊಂಡಿದೆ‌.

ಬಸವಣ್ಣನ ಸಮಕಾಲೀನ ವಚನಕಾರರಾಗಿದ್ದ ಮಸನ ಸಿದ್ದೇಶ್ವರ ಜಾತ್ರೆ ಮುನ್ನಹಳ್ಳಿ ಗ್ರಾಮದಲ್ಲಿ ನಡೆಯಬೇಕಿತ್ತು. ಅದರಂತೆ ಕಿಣ್ಣಿಸುಲ್ತಾನ್​ ಗ್ರಾಮದಲ್ಲಿ ಬಸವೇಶ್ವರ ದೇವರ ಜಾತ್ರೆ ಬಸವ ಜಯಂತಿಯಂದು ಜರುಗಬೇಕಿತ್ತು.

ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಘೋಷಣೆಯಾಗಿದ್ದರೂ, ಗ್ರಾಮಸ್ಥರು ರಥೋತ್ಸವ ನಡೆಸುವ ಆತಂಕವಿದ್ದ ಹಿನ್ನೆಲೆಯಲ್ಲಿ ಎರಡು ಗ್ರಾಮದಲ್ಲಿ ರಥದ ಸುತ್ತ ಜೆಸಿಬಿಯಿಂದ ಗುಂಡಿ ಅಗಿಯಲಾಗಿದೆ.

ಈ ಹಿಂದೆ ಆಳಂದ ತಾಲೂಕಿನ ಭೂಸನೂರು ಸೇರಿ ಚಿತ್ತಾಪುರ ತಾಲೂಕಿನ ರಾವೂರು ಅಲ್ಲದೇ ಸಾವಳಗಿ ಗ್ರಾಮಸ್ಥರು ನಿಷೇಧಾಜ್ಞೆ ಉಲ್ಲಂಘಿಸಿ ನೂರಾರು ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇನ್ನು, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ರಾವೂರ ಗ್ರಾಮವನ್ನೇ ಕ್ವಾರಂಟೈನ್ ಮಾಡಲಾಗಿತ್ತು.

ಅಲ್ಲದೇ, ಈ ಮೂರು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಅಧಿಕಾರಿಗಳು ಸೇವೆಯಿಂದ ಅಮಾನತುಗೊಂಡಿದ್ದಾರೆ‌.
 

SCROLL FOR NEXT