ಬೆಂಗಳೂರು: ಈಗಾಗಲೇ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಖಾಜಾನೆ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಲ್ಲಿ ತಮ್ಮ ವೇತನ ಪಾವತಿ ವಿಳಂಬವಾಗುವ ಆತಂಕ ಎದುರಾಗಿದೆ.
ಕೊರೋನಾ ಲಾಕ್ ಡೌನ್ ನಿಂದ ಸರ್ಕಾರದ ಖಜಾನೆ ಬಹುತೇಕ ಖಾಲಿಯಾಗಿದ್ದು, ಬೊಕ್ಕಸ ತುಂಬಿಸುವ ಎಲ್ಲಾ ತೆರಿಗೆ ಮೂಲ ಬರಿದಾಗಿದೆ. ಹೀಗಾಗಿ ಸರ್ಕಾರದ ಆದಾಯಕ್ಕೆ ಕೊಡಲಿ ಏಟು ಬಿದ್ದಿದ್ದು, ಇರುವ ಸಂಪನ್ಮೂಲವನ್ನು ಆದ್ಯತೆ ಮೇರೆಗೆ ಕೊರೋನಾ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ತಲೆನೋವು ದೊಡ್ಡ ಮಟ್ಟಿಗೆ ಕಾಡುತ್ತಿದ್ದು, ಈ ಆರ್ಥಿಕ ಸಂಕಷ್ಟದ ಹಿನ್ನೆಲೆ ಸರ್ಕಾರಿ ನೌಕರರ ವೇತನ ಪಾವತಿ ವಿಳಂಬವಾಗುತ್ತಾ ಎಂಬ ಆತಂಕ ನೌಕರರನ್ನು ಕಾಡುತ್ತಿದೆ.
ನೌಕರರಲ್ಲಿ ವೇತನ ವಿಳಂಬದ ಆತಂಕ
ರಾಜ್ಯದಲ್ಲಿ ಸುಮಾರು 5,12,521 ಸರ್ಕಾರಿ ನೌಕರರು ಇದ್ದು, 2020-21ರ ಹಣಕಾಸು ವರ್ಷದಲ್ಲಿ ಸುಮಾರು 33,000 ಕೋಟಿ ರೂಪಾಯಿಯಷ್ಟು ಮೊತ್ತ ಸರ್ಕಾರಿ ನೌಕರರಿಗೆ ವೇತನ ನೀಡಲು ಅಗತ್ಯ ಇದೆ ಎಂದು ಅಂದಾಜಿಸಲಾಗಿದೆ. ಇದು ಇತರ ಬಾಧ್ಯತಾ ವೆಚ್ಚದ ಜೊತೆಗೆ ಒಟ್ಟು ಆದಾಯ ಸ್ವೀಕೃತಿಯ ಶೇ.90 ಆಗಿದೆ. ಆದರೆ ಲಾಕ್ಡೌನ್ ಮುಂದುವರಿದಿರುವ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಕಳೆದ ಒಂದು ತಿಂಗಳಿಂದ ಅಬಕಾರಿ ತೆರಿಗೆ ಸಂಪೂರ್ಣ ಬರಿದಾಗಿದೆ. ಜೊತೆಗೆ ಲಾಕ್ ಡೌನ್ ನಿಂದ ರಾಜ್ಯ ಸರ್ಕಾರ ಸುಮಾರು 4,000 ಕೋಟಿ ರೂ. ಜಿಎಸ್ ಟಿ ತೆರಿಗೆ ನಷ್ಟ ಅನುಭವಿಸಿದೆ. ಉಳಿದಂತೆ ಬಹುತೇಕ ತೆರಿಗೆ ಮೂಲ ಸೊರಗಿರುವುದರಿಂದ ಖಜಾನೆ ಖಾಲಿಯಾಗಿದೆ. ಹೀಗಾಗಿ ಈ ಏಪ್ರಿಲ್ ತಿಂಗಳ ವೇತನ ಪಾವತಿಯಲ್ಲಿ ವಿಳಂಬವಾಗುವ ಆತಂಕ ಸರ್ಕಾರಿ ನೌಕರರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಏಪ್ರಿಲ್ ವೇತನ ಮೇ ಮೊದಲ ವಾರದಲ್ಲಿ ಪಾವತಿಯಾಗುತ್ತದೆ. ಈ ಸಕಾಲ ವೇತನ ಪಾವತಿ ಅರ್ಥಿಕ ಸಂಕಷ್ಟದ ಹಿನ್ನೆಲೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಭಯ ಅವರನ್ನು ಬಲವಾಗಿ ಕಾಡುತ್ತಿದೆ. ಕಳೆದ ಡಿಸೆಂಬರ್ ಮತ್ತು ಈ ವರ್ಷಾರಂಭದಲ್ಲಿ ಸುಮಾರು 10 ಇಲಾಖೆಗಳ ವೇತನ ಪಾವತಿ ವಿಳಂಬವಾಗಿತ್ತು. ಇದಕ್ಕೆ ಅರ್ಥಿಕ ಸಂಕಷ್ಟ ಕಾರಣ ಎಂಬ ಕೂಗು ಕೇಳಿ ಬಂದಿತ್ತು. ಇದೀಗ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸ ಬರಿದಾಗಿರುವುದರಿಂದ ಈ ಬಾರಿಯೂ ವೇತನ ವಿಳಂಬ ಸಾಧ್ಯತೆ ಹೆಚ್ಚಾಗಿದೆ ಎಂದು ಕೆಲ ಹಿರಿಯ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ತೆರಿಗೆ ಪಾಲು ಬಿಡುಗಡೆಯಿಂದ ರಿಲೀಫ್?
ಇತ್ತ 15ನೇ ಹಣಕಾಸು ಆಯೋಗದ ಮೂಲಕ ಕೇಂದ್ರ ಸರ್ಕಾರದ ತೆರಿಗೆ ಪಾಲಿನಲ್ಲಿ ಮೊದಲ ಕಂತಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 1,679 ಕೋಟಿ ರೂ ಬಿಡುಗಡೆ ಮಾಡಿದೆ. ಈ ಕೇಂದ್ರದ ತೆರಿಗೆ ಪಾಲು ಬಿಡುಗಡೆಯಾಗಿರುವುದು ರಾಜ್ಯದ ಬರಿದಾದ ಬೊಕ್ಕಸಕ್ಕೆ ಸಂಜೀವಿನಿಯಾಗಿ ಪರಿಣಮಿಸಿದೆ ಎನ್ನಲಾಗಿದೆ. ಈ ಹಣ ಬಿಡುಗಡೆಯಿಂದ ಸರ್ಕಾರಿ ನೌಕರರ ವೇತನ ವಿಳಂಬ ಸಾಧ್ಯತೆಯನ್ನು ಕಡಿಮೆಗೊಳಿಸಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಸರಿದೂಗಿಸಲು ಮುಂದಿನ 3-4 ತಿಂಗಳು ಭಾಗಶ: ವೇತನವನ್ನು ವಿಳಂಬವಾಗಿ ಪಾವತಿಸುವ ಬಗ್ಗೆನೂ ಸರ್ಕಾರ ಚಿಂತನೆ ನಡೆಸಿತ್ತು. ಇದೀಗ ಕೇಂದ್ರದ ತೆರಿಗೆ ಪಾಲು ಬಿಡುಗಡೆಯಾಗಿರುವುದರಿಂದ ಏಪ್ರಿಲ್ ತಿಂಗಳ ವೇತನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಲಾಕ್ಡೌನ್ ಮುಂದುವರಿದು, ಕೇಂದ್ರ ಸರ್ಕಾರದ ಅನುದಾನ ಬಾರದೇ ಹೋದಲ್ಲಿ, ಮೇ ತಿಂಗಳ ವೇತನ ವಿಳಂಬವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.