ರಾಜ್ಯ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 19, ಐಐಎಂಬಿಯಲ್ಲಿ ಮೊದಲ ಕೊರೋನಾ ಪ್ರಕರಣ ದೃಢ

Nagaraja AB

ಬೆಂಗಳೂರು: ಕ್ಯಾಂಪಸ್ ಆವರಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಗುಲಿರುವುದರ ಬಗ್ಗೆ ಕೊನೆಗೂ ಭಾರತೀಯ ವಿಜ್ಞಾನ ಸಂಸ್ಥೆ- ಐಐಎಸ್ ಸಿ ಮೌನ ಮುರಿದಿದೆ.

ಸಂಸ್ಥೆಯಲ್ಲಿನ ಪಾರದರ್ಶಕತೆ ಬಗ್ಗೆ ಅಲ್ಲಿರುವ ವಿದ್ಯಾರ್ಥಿಗಳಲ್ಲಿರುವ ಭೀತಿಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ
ವರದಿ ಪ್ರಕಟಗೊಂಡ ಬೆನ್ನಲ್ಲೇ, ಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದಾರೆ.

ಐಐಎಸ್ ಸಿ ಆವರಣದಲ್ಲಿ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 19 ಮಂದಿಗೆ ಕೊರೋನಾ ಪಾಸಿಟಿವ್  ದೃಢಪಟ್ಟಿರುವುದಾಗಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕ್ಯಾಂಪಸ್ ನಲ್ಲಿದ್ದ 34 ಮಂದಿ ಪಿಂಚಣಿದಾರರು, ಉದ್ಯೋಗಿಗಳಿಗೂ ಕೊರೋನಾ ಬಂದಿರುವುದಾಗಿ ತಿಳಿಸಲಾಗಿದೆ. 

ಕೋವಿಡ್ ಪಾಸಿಟಿವ್ ಬಂದಿದ್ದ15 ಹಾಸ್ಟೆಲ್ ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳಲ್ಲಿ ನಗೆಟಿವ್ ಬಂದಿದೆ. ಕಂಟೈನ್ ಮೆಂಟ್
ವಲಯವೆಂದು ಘೋಷಿಸಲಾಗಿದ್ದು,  ಸೋಂಕಿತರು ಇದ್ದ ಜಾಗಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ  ಶುಚಿಗೊಳಿಸಲಾಗಿದೆ. ಅನಧಿಕೃತ ವ್ಯಕ್ತಿಗಳು ಕ್ಯಾಂಪಸ್ ಆವರಣಕ್ಕೆ ಬಾರದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ 
ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಐಐಎಂಬಿಯಲ್ಲಿ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆಯಾಗಿದೆ. ಐಐಎಂಬಿ ಕ್ಯಾಂಪಸ್ ನ ಹೊರಾಂಗಣ ತೋಟಗಾರಿಕೆ ಕೆಲಸ ಮಾಡುತ್ತಿದ್ದ ಏಜೆನ್ಸಿಯೊಂದರ ಸದಸ್ಯರೊಬ್ಬರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿರುವುದಾಗಿ ಸಂಸ್ಥೆಯ
ವಕ್ತಾರರಾದ ಕೆ. ಕವಿತಾ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲಾ 50 ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ. ಸಂಪೂರ್ಣ
ಸಂಬಳ ನೀಡುವ ಭರವಸೆ ನೀಡಲಾಗಿದೆ. ಕ್ಯಾಂಪಸ್ ಆವರಣದಲ್ಲಿನ ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ಡ್ ಮಾಡಲಾಗಿದೆ ಎಂದು
ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT