ರಾಜ್ಯ

ಸೋಷಿಯಲ್ ಮೀಡಿಯಾಗಳನ್ನು ಯುಪಿಎಸ್ಸಿ ಟಾಪರ್ ಗಳು ಎಷ್ಟು, ಯಾವ ರೀತಿ ಬಳಕೆ ಮಾಡುತ್ತಿದ್ದರು?

Sumana Upadhyaya

ಬೆಂಗಳೂರು: ಈಗ ಸೋಷಿಯಲ್ ಮೀಡಿಯಾಗಳದ್ದೇ ಜಮಾನ, ಸೋಷಿಯಲ್ ಮೀಡಿಯಾಗಳಿಗೆ ಮಾರು ಹೋಗದವರಿಲ್ಲ, ಅದರಿಂದ ದೂರವುಳಿಯುವವರು ಬೆರಳೆಣಿಕೆಯಲ್ಲಿರಬಹುದಷ್ಟೆ.

ಕೇಂದ್ರ ಲೋಕ ಸೇವಾ ಆಯೋಗ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದಿಂದ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ಸಾಮಾಜಿಕ ಮಾಧ್ಯಮವನ್ನು ಅಗತ್ಯವಿರುವಷ್ಟು ವಿವೇಕದಿಂದ ಬಳಕೆ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಕೆಲವರು ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧ ಹಾಕಿಕೊಂಡಿದ್ದರೆ, ಕೆಲವರು ಅಗತ್ಯವಿರುವಷ್ಟು ಬಳಸುತ್ತಿದ್ದರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನ ಹಳೆ ವಿದ್ಯಾರ್ಥಿ, ರಾಜ್ಯದಲ್ಲಿ ಮೊದಲ ಶ್ರೇಣಿಯಲ್ಲಿ ಮತ್ತು ಭಾರತ ಮಟ್ಟದಲ್ಲಿ 5ನೇ ರ್ಯಾಂಕ್ ಗಳಿಸಿರುವ ಜಯದೇವ್ ಸಿ ಎಸ್, ತಮ್ಮ ಸ್ನೇಹಿತರು ಮತ್ತು ಬ್ಯಾಚ್ ಮೇಟ್ ಗಳ ಜೊತೆ ಸಂಪರ್ಕದಲ್ಲಿರಲು ಮಾತ್ರ ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಿದ್ದರಂತೆ.

ದೇಶ ಮಟ್ಟದಲ್ಲಿ 132ನೇ ರ್ಯಾಂಕ್ ಗಳಿಸಿರುವ ಗಂಗಾವತಿಯ ವಿನೋದ್ ಪಾಟೀಲ್ ಹೆಚ್, ಸುರತ್ಕಲ್ ನ ಎನ್ ಐಟಿಕೆಯ ಪದವೀಧರನಾಗಿದ್ದು ಕೇವಲ ಸುದ್ದಿಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಮಾತ್ರ ಬಳಸುತ್ತಿದ್ದರಂತೆ. ಕಂದಾಯ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಅವರು ಮಹಿಳೆಯರ ಸುರಕ್ಷತೆ ಬಗ್ಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರಂತೆ.

ಚಿಕ್ಕಮಗಳೂರಿನ ಯಶಸ್ವಿನಿ ಬಿ ಅಖಿಲ ಭಾರತ ಮಟ್ಟದಲ್ಲಿ 71ನೇ ರ್ಯಾಂಕ್ ಗಳಿಸಿದ್ದಾರೆ. ಅವರು ಈಗಾಗಲೇ ಭಾರತೀಯ ರಕ್ಷಣಾ ಎಸ್ಟೇಟ್ ಸರ್ವಿಸ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ತರಬೇತಿ ಮುಗಿಯುವವರೆಗೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತಿರಲಿಲ್ಲವಂತೆ. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ್ ಬಿ ಎಸ್ ಅವರ ಮಗಳಾಗಿರುವ ಯಶಸ್ವಿನಿ ಸಿಲೆಬಸ್ ಜೊತೆಗೆ ಇಂಟರ್ನೆಟ್ ನಲ್ಲಿ ಬರುವ ಸಾಕಷ್ಟು ಮಾಹಿತಿಗಳೇ ಪರೀಕ್ಷೆಗೆ ತಯಾರಾಗಲು ಸಾಕಾಗುತ್ತದೆ ಎನ್ನುತ್ತಾರೆ.

ದೇಶದಲ್ಲಿ 446ನೇ ರ್ಯಾಂಕ್ ಗಳಿಸಿರುವ ಆನಂದ್ ಕಲಡಗಿ, ಮುಖ್ಯ ಪರೀಕ್ಷೆ ಮುಗಿಸಿದ ನಂತರವೇ ಸೋಷಿಯಲ್ ಮೀಡಿಯಾಕ್ಕೆ ಮತ್ತೆ ಮರಳಿದ್ದು, ಅಲ್ಲಿಯವರೆಗೆ ಸೋಷಿಯಲ್ ಮೀಡಿಯಾ ಬಳಸುತ್ತಿರಲಿಲ್ಲ ಎನ್ನುತ್ತಾರೆ.

278ನೇ ರ್ಯಾಂಕ್ ಗಳಿಸಿರುವ ಡಾ ಅಭಿಷೇಕ್ ಗೌಡ, ವಾಟ್ಸಾಪ್ ಮತ್ತು ಟೆಲಿಗ್ರಾಂನ್ನು ಅಧ್ಯಯನಕ್ಕೆ ಬಳಸುತ್ತಿದ್ದೆ, ಫೇಸ್ ಬುಕ್ , ಇನ್ಸ್ಟಾಗ್ರಾಂನ್ನು ತಿಂಗಳಿಗೊಮ್ಮೆ ಬಳಸುತ್ತಿದ್ದೆ ಎನ್ನುತ್ತಾರೆ.

SCROLL FOR NEXT