ರಾಜ್ಯ

ಉಡುಪಿ ಸರ್ಕಾರಿ ಆಸ್ಪತ್ರೆ ಹೊರಗಿನ ಕಸದ ಬುಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ!

Srinivasamurthy VN

ಉಡುಪಿ: ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹೊರಗಿನ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. 

ನಗರದ ಕೂಸಮ್ಮ ಶಂಭು ಶೆಟ್ಟಿ ಮತ್ತು ಹಾಜಿ ಅಬ್ದುಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಇರುವ ಮಾಂಸಹಾರಿ ಹೊಟೇಲ್ ಬಳಿಯ ತ್ಯಾಜ್ಯದ ಬುಟ್ಟಿಗೆ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿದ್ದಾರೆ. ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಚತಾ ಸಿಬ್ಬಂದಿಗಳು ಹೊಟೇಲ್ ನವರು ಎಸೆದ ಬಾಳೆ ಎಲೆಯ ತ್ಯಾಜ್ಯದ ಸಂಗ್ರಹಿಸಲು ಬಂದಾಗ ಬುಟ್ಟಿಯಲ್ಲಿ ಮಗು ಇರುವುದನ್ನು ಕಂಡಿದ್ದಾರೆ. 

ತ್ಯಾಜ್ಯ ತುಂಬಿದ್ದ ಪೈಂಟ್ ಡಬ್ಬಿಯ ಒಳಗೆ ಬಾಳೆ ಎಲೆಯ ಮಧ್ಯೆ ಆಗಷ್ಟೇ ಜನ್ಮ ತಾಳಿದ ಶಿಶು ಕೂಗುವುದನ್ನು ಗಮನಿಸಿದ ಕಾರ್ಮಿಕರು ಸ್ಥಳೀಯ ನಿತ್ಯಾನಂದ ಒಳಕಾಡು ಅವರ  ನೆರವಿನಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು 1.2 ಕೆಜಿ ತೂಕವಿದ್ದು,  ಎಂದು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ಯ ಹೇಳಿದ್ದಾರೆ.

 ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ ಐ ಶಕ್ತಿವೇಲು, ಮಹಿಳಾ ಠಾಣೆ ಎಸ್ ಐ ವೈಲೆಟ್ ಫೆಮಿನಾ ಮತ್ತಿತರರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ಮಗುವಿನ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಂತೆಯೇ ಮಗುವನ್ನು ದತ್ತು ನೀಡಲು ಸಿದ್ಧವಿದೆ. ಆದರೆ ಯಾರೂ ಮುಂದೆ ಬಾರದಿದ್ದರೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA)ಗೆ ಮಗುವನ್ನು ಒಪ್ಪಿಸಲು ನಿರ್ಧರಿಸಲಾಗಿದೆ. 

SCROLL FOR NEXT