ಬೆಂಗಳೂರು: ಇತ್ತೀಚೆಗೆ ನಡೆದ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀವುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಮೀವುದ್ದೀನ್ ಅನ್ನು ಬಂಧಿಸಿದ್ದಾರೆ. ಬಂಧಿತ ಸಮೀವುದ್ದಿನ್ 'ಅಲ್ ಹಿಂದ್' ಸಂಘಟನೆ ಜತೆಗೆ ನಂಟು ಹೊಂದಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಾಂಗ್ಲಾ ಮೂಲದ ಅಲ್-ಹಿಂದ್ ಉಗ್ರಗಾಮಿ ಸಂಘಟನೆಯ ದಕ್ಷಿಣ ಭಾರತದ ಪ್ರಮುಖ ನಾಯಕನಾಗಿದ್ದ ಸಮೀವುದ್ದೀನ್ ಎಂಬಾತನನ್ನು ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆತನನ್ನ ನಿನ್ನೆ ತಡರಾತ್ರಿ ತನ್ನ ಡಿಜೆ ಹಳ್ಳಿಯ ನಿವಾಸದಿಂದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಎಟಿಸಿ ಮತ್ತು ಸಿಸಿಬಿ ಪೊಲೀಸರ ವಿವಿಧ ತಂಡಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ 2016ರಲ್ಲಿ ಶಿವಾಜಿನಗರ ಬಳಿ ನಡೆದ ಹಿಂದೂ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಜೊತೆಗೆ, ಈತ ಅಲ್ ಹಿಂದ್ ಸಂಘಟನೆಯ ಸದಸ್ಯರ ಜೊತೆ ನಿಕಟ ಸಂಪರ್ಕ ಸಹ ಹೊಂದಿದ್ದ ಎಂದು ಹೇಳಲಾಗಿದೆ. ಸದ್ಯ ಈತನನ್ನ ಸಿಸಿಬಿ ವಶಕ್ಕೆ ಪಡೆದು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.