ಬೆಂಗಳೂರು: ಪ್ರತಿಯೊಬ್ಬ ರೋಗಿಗೂ ಸೂಕ್ತ ಚಿಕಿತ್ಸೆ ದೊರಕಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ.ಇದಕ್ಕಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕೊರೊನಾ ಚಿಕಿತ್ಸೆಗೆ ಮೂಲಸೌಕರ್ಯ ಒದಗಿಸುವುದು ದೊಡ್ಡ ಸವಾಲು ನಿಜ.ಆದರೆ ಅದನ್ನು ಹಿಮ್ಮೆಟ್ಟಿಸುವ ನಮ್ಮ ಸಂಕಲ್ಪ ಅದಕ್ಕಿಂತ ಬಲವಾಗಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವುದು ನನ್ನ ಗಮನಕ್ಕೆ ಬಂದ ಕೂಡಲೇ 40ಕ್ಕೂ ಹೆಚ್ಚು ರೋಗಿಗಳನ್ನು ವಿಕ್ಟೊರಿಯಾ, ಬೌರಿಂಗ್ & ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲು ಅಂಬುಲನ್ಸ್ ವ್ಯವಸ್ಥೆ ಮಾಡಲಾಗಿದೆ.ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ 20 ಭಾರೀ ಗಾತ್ರದ ಆಕ್ಸಿಜನ್ ಸಿಲಿಂಡರ್ ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 80,643 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 695 ಅಂದರೆ ಶೇ. 0.86% ಸೋಂಕಿತರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋಂಕಿತರ ಚಿಕಿತ್ಸೆಗೆ ಮೂಲ ಭೂತ ಸೌಕರ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು ಯಾವುದೇ ಕೊರತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.