ರಾಜ್ಯ

ಡಿಜೆ.ಹಳ್ಳಿ ಗಲಭೆ ಪ್ರಕರಣ: ದೆಹಲಿಗೆ ಡಿಕೆಶಿ ಭೇಟಿ, ಕಾಂಗ್ರೆಸ್ ಉನ್ನತ ನಾಯಕರಿಗೆ ವರದಿ ಸಲ್ಲಿಕೆ

Manjula VN

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ 4 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದು, ಈ ವೇಳೆ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಿಗೆ ಡಿಜೆ.ಹಳ್ಳಿ ಗಲಭೆ ಪ್ರಕರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಚಟುವಟಿಕೆಳ ನಾಲ್ಕೈದು ತಿಂಗಳ ವರದಿಯನ್ನು ಸಲ್ಲಿಸಲಿದ್ದಾರೆಂದು ಹೇಳಲಾಗುತ್ತಿದೆ. 

ದೆಹಲಿಗೆ ಭೈಟಿ ನೀಡಿರುವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಮುಖಾಮುಖಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ಕೊರೋನಾ ವೈರಸ್ ಅಡ್ಡಿಯಾಗಿದ್ದು, ಈ ಹಿನ್ನೆಲೆಯಲ್ಲಿ ಝೂಮ್ ಆ್ಯಪ್ ಮೂಲಕ ಹೈಕಮಾಂಡ್ ಜೊತೆ ಡಿಕೆಶಿ ಸಮಾಲೋಚನೆ ನಡೆಸಲಿ ವರದಿ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. 

ಮಾರ್ಚ್ ತಿಂಗಳಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರೂ ಜುಲೈ ತಿಂಗಳಿನಲ್ಲಿ ಡಿಕೆ ಶಿವಕುಮಾರ್ ಅವರು ಪದಗ್ರಹಣ ಮಾಡಿದ್ದರು. 

ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಬಿಜೆಪಿ ರಾಜಕೀಯ ವಿಚಾರವಾಗಿ ಪರಿವರ್ತಿಸಿದ್ದು, ಪುಲಿಕೇಶಿನಗದಲ್ಲಿರುವ ತನ್ನ ಹಿಡಿತವನ್ನು ಕಳೆದುಕೊಳ್ಳುವ ಭಯ ಕಾಂಗ್ರೆಸ್'ಗೆ ಇದೀಗ ಎದುರಾಗಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಯಿಂದಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್ ವಿ ದೇವರಾಜ್ ಅವರು 11,000 ಮತಗಳಿಂದ ಸೋಲು ಕಂಡಿದ್ದರು. ಇದೀಗ ಗಲಭೆ ಪ್ರಕರಣದಿಂದಾಗಿ ಪುಲಿಕೇಶಿನಗರ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್'ಗೆ ಎದುರಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಮಾತನಾಡಿ, ಲಾಕ್'ಡೌನ್ ಹಾಗೂ ಇತರೆ ಕಾರಣಗಳಿಂದಾಗಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ದೆಹಲಿಗೆ ಭೇಟಿ ನೀಡುತ್ತಿರುವ ಅವರು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಹೈಕಮಾಂಡ್'ಗೆ ಮಾಹಿತಿ ನೀಡಲಿದ್ದಾರೆ. ಎಐಸಿಸಿ ಸಮನ್ಸ್ ನೀಡಿದ ಕಾರಣಕ್ಕೆ ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ಸುದ್ದಿ ಹರಡದಂತೆ ತಿಳಿಸಿದ್ದಾರೆ. 

SCROLL FOR NEXT