ಬೆಂಗಳೂರು: ಕೊರೋನಾ ಭೀತಿ ನಡುವಲ್ಲೇ ವೈರಸ್ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆಗಳೊಂದಿಗೆ ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ೆಂದು ಹೇಳಲಾಗುತ್ತಿದೆ. ಈ ಕುರಿತು ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸಂವಿಧಾನದ 174 (1) ನೇ ವಿಧಿ ಅನ್ವಯ, ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು ಎಂದು ತಿಳಿಸಿದೆ. ಆದ್ದರಿಂದ, ಸೆಪ್ಟೆಂಬರ್ ಅಂತ್ಯದ ಮೊದಲು ಅಧಿವೇಶನವನ್ನು ನಡೆಸುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರು, ಅಧಿವೇಶನ ನಡೆಸುವ ದಿನಾಂಕ ಕುರಿತು ಸಾಕಷ್ಟು ಸಲಹೆಗಳು ಬರುತ್ತಿವೆ. ಆದರೆ, ಈ ಕುರಿತ ಅಂತಿಮ ನಿರ್ಧಾರವನ್ನು ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ನಡುವೆಯೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕುರಿತು ಸಾಕಷ್ಟು ಪ್ರಸ್ತಾಪ, ಶಿಫಾರಸುಗಳು ಬರುತ್ತಿವೆ. ಶಾಸಕರು ಕುಳಿತುಕೊಳ್ಳುವ ಎರಡು ಆಸನಗಳ ಮಧ್ಯೆ ಬ್ಯಾರಿಕೇಡ್ ಹಾಕುವಂತೆ ಒಂದು ಸಲಹೆ ಬಂದಿದ್ದರೆ, 60 ವರ್ಷಕ್ಕಿಂತ ಮೇಲ್ಪಟ್ಟ ಶಾಸಕರು ಹಾಗೂ ಅವರ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಶಾಸಕರ ಆರೋಗ್ಯದ ಮೇಲೆ ವಿಶೇಷ ನಿಗಾ ಇಡುವಂತೆ ತಿಳಿಸಲಾಗುತ್ತಿದೆ. ಅಲ್ಲದೆ, ಅಧಿವೇಶನ ನಡೆಯುವ ದಿನಗಳ ಸಂಖ್ಯೆ ಇಳಿಸುವಂತೆಯೂ ಸಲಹೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ಅಧಿವೇಶನದ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆಂದು ಹೇಳಿದ್ದಾರೆ.
ವಿಧಾನಸೌಧ ಅಲ್ಲದೆ, ಬೇರೆ ಸ್ಥಳದಲ್ಲಿ ಅಧಿವೇಶನ ನಡೆಸುವ ಕುರಿತ ಚಿಂತನಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ನಡೆಸುವ ಕುರಿತು ಸರ್ಕಾರ ದಿನಾಂಕ ನಿರ್ಧರಿಸಿದ ಕೂಡಲೇ ಈ ಕುರಿತ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.