ರಾಜ್ಯ

ಕೊರೋನಾ ಎಫೆಕ್ಟ್: ಬಾದಾಮಿಯಿಂದ ದೂರ ಉಳಿದ ಸಿದ್ದರಾಮಯ್ಯ?

Manjula VN

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದ ಕ್ಷೇತ್ರ ಬಾದಾಮಿ. ಇಲ್ಲಿಂದ ಚುನಾಯಿತರಾದ ಬಳಿಕ ಸಿದ್ದರಾಮಯ್ಯ ಅವರು ಬಿರುಸಿನ ರಾಜ್ಯ ರಾಜಕೀಯ ಮಧ್ಯೆಯೂ ತಿಂಗಳಿಗೊಮ್ಮೆ ಬಾದಾಮಿ ಪ್ರವಾಸ ಕೈಗೊಳ್ಳುತ್ತಿದ್ದರು. ಆದರೀಕ ಕೊರೋನಾ ವೈರಸ್ ಪರಿಣಾಮದಿಂದಾಗಿ ಬರೋಬ್ಬರಿ 82 ದಿನಗಳಾದರೂ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಬಾದಾಮಿ ಕ್ಷೇತ್ರದ ಜನತೆ ತಮ್ಮ ಸಮಸ್ಯೆಗಳ ಮೂಟೆ ಹೊತ್ತು ತಮ್ಮ ಕ್ಷೇತ್ರದ ಶಾಸಕರು ಯಾವಾಗ ಕ್ಷೇತ್ರಕ್ಕೆ ಬರುತ್ತಾರೆಂದು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. 

ಸಾಕಷ್ಟು ಕ್ಷೇತ್ರಗಳ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಕೊರೋನಾ ಹಾಗೂ ಪ್ರವಾಹ ಪರಿಸ್ಥಿತಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಸ್ವಕ್ಷೇತ್ರ ಬಾದಾಮಿಯಲ್ಲಿ ಕೇವಲ ದೂರವಾಣಿ ಸಂಪರ್ಕದಲ್ಲಿರುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಕ್ಷೇತ್ರದ ಜನತೆ ತೀವ್ರ ಕೆಂಡಾಮಂಡಲಗೊಳ್ಳುವಂತೆ ಮಾಡಿದೆ. 

ಬಾದಾಮಿ ತಾಲೂಕಿನ ಆಡಳಿತ ಮಾಹಿತಿ ನೀಡಿರುವ ಪ್ರಕಾರ, ಕ್ಷೇತ್ರದಲ್ಲಿ ಈವರೆಗೂ 600 ಮಂದಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಇದರಲ್ಲಿ ಬಹುತೇಕರು ಗ್ರಾಮೀಣ ಭಾಗದ ಜನರಾಗಿದ್ದಾರೆ. ಶೇ.80ರಷ್ಟು ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಮಹಾಮಾರಿ ವೈರಸ್'ಗೆ ಈವರೆಗೂ 66 ಮಂದಿ ಬಲಿಯಾಗಿದ್ದು, ಇದರಲ್ಲಿ ಬಾದಾಮಿ ತಾಲೂಕಿನಲ್ಲೇ ಶೇ.20ರಷ್ಟು ಮಂದಿ ಮರಣ ಹೊಂದಿದ್ದಾರೆಂದು ತಿಳಿಸಿದ್ದಾರೆ. 

ಜೂನ್ ತಿಂಗಳಿನಲ್ಲಿ ಎರಡು ದಿನಗಳ ಕಾಲ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಕೊರೋನಾ ವೈರಸ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಶ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿದ್ದರು. ಹೋಮ್ ಕ್ವಾರಂಟೈನ್ ಪೂರ್ಣಗೊಂಡ ಬಳಿಕ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಈ ವರೆಗೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂದು ಹೇಳಲಾಗುತ್ತಿದೆ. 

SCROLL FOR NEXT