ರಾಜ್ಯ

ಪ್ರವಾಹದಿಂದ 2030 ಕೋಟಿ ರೂ ವೆಚ್ಚದ ರಸ್ತೆ, ಸೇತುವೆ ಹಾನಿ: ಡಿಸಿಎಂ ಗೋವಿಂದ ಕಾರಜೋಳ

Vishwanath S

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 2032 ಕೋಟಿ ರೂ. ಮೊತ್ತದ  ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲು 478 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು  ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹದಿಂದ ಆಗಿರುವ ಹಾನಿ ವಿವರ, ಹಾಗೂ ತುರ್ತು ಕಾಮಗಾರಿಗಳ ಕುರಿತ ಚರ್ಚಿಸಿದ ಡಿಸಿಎಂ, ರಾಜ್ಯದ ಹಲವು  ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ, ಭೀಕರ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಯ ರಸ್ತೆಗಳು, ಸೇತುವೆಗಳು, ಕಟ್ಟಡಗಳು ದುರಸ್ತಿಗೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಂಪರ್ಕಕ್ಕೆ  ತೊಂದರೆಯಾಗಿದೆ. 

ಉತ್ತರ ವಲಯದಲ್ಲಿ 1437 ಕೋಟಿ, ಕೇಂದ್ರ ವಲಯದಲ್ಲಿ 135 ಕೋಟಿ, ದಕ್ಷಿಣ ವಲಯದಲ್ಲಿ 181 ಕೋಟಿ, ಈಶಾನ್ಯ ವಲಯದಲ್ಲಿ 71 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿಯ 26 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ, ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತಾಗಿ ಸಂಪರ್ಕ ಕಲ್ಪಿಸಬೇಕಾದ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕಿದೆ. 

ಹಾನಿ ವಿವರ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳ ಕುರಿತ ಸಮಗ್ರ ವಿವರವನ್ನು ರಾಜ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸಚಿವ ಸಂಪುಟ ಶಾಖೆಗೆ ಕೂಡಲೇ ಸಲ್ಲಿಸಬೇಕು. ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡು, ಸಾರ್ವಜನಿಕ ಸಂಪರ್ಕಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಕಾರಜೋಳ ಸೂಚಿಸಿದರು.

ಸಭೆಯಲ್ಲಿ  ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್, ಪ್ರವಾಹದಿಂದ ಆಗಿರುವ ಹಾನಿ  ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳ ವಿವರವನ್ನು ವಿಸ್ತೃತವಾಗಿ ವಿವರಿಸಿದರು.  ಅಪರ  ಮುಖ್ಯಕಾರ್ಯದರ್ಶಿ  ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ  ಹಿರೇಮಠ,  ಕಾರ್ಯನಿರ್ವಹಕ ಅಭಿಯಂತರರಾದ ಜಿ.ಪಿ.ಕುಮಾರ್, ಉಪಕಾರ್ಯದರ್ಶಿ ವಿಜಯ  ಕುಮಾರಿ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರರು  ಉಪಸ್ಥಿತರಿದ್ದರು.

SCROLL FOR NEXT