ರಾಜ್ಯ

'ಕ್ವಾರಂಟೈನ್ ನಲ್ಲಿದ್ದೇವೆ', ಜನರು ಕರೆ ಮಾಡಿದರೆ ಕೆಲಸ ಮಾಡಲು ಇಷ್ಟವಿಲ್ಲದ ಬಿಬಿಎಂಪಿ ಎಂಜಿನಿಯರ್ ಗಳ ಉತ್ತರವಿದು!

Sumana Upadhyaya

ಬೆಂಗಳೂರು: ತಮ್ಮ ಮನೆ ಹತ್ತಿರದ ರಸ್ತೆ ರಿಪೇರಿ ಮಾಡಿಸಲು ವಾರ್ಡ್ ಎಂಜಿನಿಯರ್ ನ್ನು ಸಂಪರ್ಕಿಸಲು ಕಳೆದ ಕೆಲ ದಿನಗಳಿಂದ ಬಸವನಗುಡಿಯ ನಿವಾಸಿ ಗೋಪಾಲ್ ಎಂ ಪ್ರಯತ್ನಿಸುತ್ತಿದ್ದರು. ಆದರೆ ಪ್ರತಿ ಬಾರಿ ಅವರು ಕರೆ ಮಾಡಿದಾಗ ಎಂಜಿನಿಯರ್ ತಾವು ಕ್ವಾರಂಟೈನ್ ನಲ್ಲಿದ್ದು ಹೊರಗೆ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.

ರಾಜ ರಾಜೇಶ್ವರಿ ನಗರದ ನಿವಾಸಿ ಮಧು ಎಂ ಅವರಿಗೆ ಸಹ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ತಮ್ಮ ಮನೆ ಹತ್ತಿರದ ತ್ಯಾಜ್ಯ ವಿಲೇವಾರಿ ಪ್ರದೇಶವನ್ನು ಸ್ವಚ್ಛಗೊಳಿಸಲು ಎಂಜಿನಿಯರ್ ಗೆ ಕರೆ ಮಾಡಿದರೆ ಕ್ವಾರಂಟೈನ್ ನಲ್ಲಿದ್ದೇನೆ ಎಂದು ಉತ್ತರ ಬರುತ್ತಿತ್ತಂತೆ.
ಅದಾಗಿ ಒಂದು ತಿಂಗಳಾಗಿದೆ, ಎಂಜಿನಿಯರ್ ಕ್ವಾರಂಟೈನ್ ನಲ್ಲಿದ್ದರೆ ಬೇರೊಬ್ಬರನ್ನು ಸಮಸ್ಯೆ ಬಗೆಹರಿಸಲು ನೇಮಕ ಮಾಡಬಹುದಲ್ಲವೇ ಎಂದು ಮಧು ಕೇಳುತ್ತಾರೆ, ಇದು ಕೇವಲ ನಾಗರಿಕರ ಸಮಸ್ಯೆ ಮಾತ್ರವಲ್ಲವಂತೆ. ಬಿಬಿಎಂಪಿ ಅಧಿಕಾರಿಗಳಿಗೆ ಕೂಡ ಇದೇ ರೀತಿ ಉತ್ತರ ನೀಡುತ್ತಾರಂತೆ. ಕೆಲಸ ಮಾಡಲು ಮನಸ್ಸಿಲ್ಲದಾಗ ಕ್ವಾರಂಟೈನ್ ನಲ್ಲಿದ್ದೇವೆ ಎಂದು ಸುಳ್ಳು ಹೇಳುತ್ತಾರೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಇದಕ್ಕೆ ಬ್ರೇಕ್ ಹಾಕಲು ಇದೀಗ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಮತ್ತು ಮೇಯರ್ ಎಂ ಗೌತಮ್ ಕುಮಾರ್ ಅವರೇ ಕಠಿಣ ಕ್ರಮಕ್ಕೆ ಮುಂದಾಗಿದ್ದು ಕೆಲಸಕ್ಕೆ ರಜೆ ಹಾಕುವ ಅಧಿಕಾರಿಗಳು ಏನು ಆರೋಗ್ಯ ಸಮಸ್ಯೆ ಎಂದು ವೈದ್ಯಕೀಯ ಸರ್ಟಿಫಿಕೇಟ್ ನೀಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಅಧಿಕಾರಿಗಳ ಕ್ವಾರಂಟೈನ್ ಸ್ಥಿತಿಗತಿಯನ್ನು ಕೋವಿಡ್ ವಾರ್ ರೂಂನ ದಾಖಲೆಗಳನ್ನು ತರಿಸಿ ನೋಡಿ ತಪಾಸಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೋನಾ ಲಾಕ್ ಡೌನ್ ನಂತರ ನಗರದಾದ್ಯಂತ ಕೆಲಸ ಕಾರ್ಯಗಳು ಕುಂಠಿತವಾಗಿವೆ. ಈ ಕೆಲಸದ ಉಸ್ತುವಾರರಾಗಿರುವ ಎಂಜಿನಿಯರ್ ಗಳು ಹೋಂ ಕ್ವಾರಂಟೈನ್ ಎಂದು ಹೇಳುತ್ತಾರೆ. ಹೀಗಿರುವಾಗ ಏನು ಮಾಡಲೂ ಸಾಧ್ಯವಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಕೆಲವರು ನಿಜವಾಗಿಯೂ ಹೋಂ ಕ್ವಾರಂಟೈನ್ ನಲ್ಲಿರುತ್ತಾರೆ, ಆದರೆ ಕೆಲವರು ಸುಳ್ಳು ಹೇಳುತ್ತಾರೆ, ಆದರೆ ಇನ್ನು ಮುಂದೆ ಅಂತವನ್ನು ತಪಾಸಣೆ ಮಾಡಲಾಗುತ್ತದೆ. ಸುಳ್ಳು ಹೇಳಿದವರಿಗೆ ವಿನಾಯ್ತಿ ಇರುವುದಿಲ್ಲ ಎಂದರು.

SCROLL FOR NEXT