ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಆಟಿಕೆ ಉದ್ಯಮದಲ್ಲಿ ಬಹುಪಾಲು ಚೀನಾ ದೇಶದಿಂದ ಬರುತ್ತಿರುವುದು ಗೊತ್ತೇ ಇದೆ. ಆದರೆ ಚೀನಾ ದೇಶದೊಂದಿಗಿನ ಗಡಿ ವಿಚಾರದಲ್ಲಿ ಹಳಸಿರುವ ಸಂಬಂಧದಿಂದಾಗಿ ಹಲವು ಉದ್ಯಮಗಳ ಮೇಲೆ ಭಾರತ ಈಗಾಗಲೇ ನಿಷೇಧ ಹೇರಿದೆ. ಅದೀಗ ಚಿಕ್ಕಮಕ್ಕಳು ಆಟವಾಡುವ ಆಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ.
ಭಾರತ ಸರ್ಕಾರ ಚೀನಾದ ಎಲೆಕ್ಟ್ರಾನಿಕ್ಸ್ ಆಟಿಕೆಗಳ ಮೇಲೆ ಶೇಕಡಾ 60ರಷ್ಟು ಆಮದು ಸುಂಕ ವಿಧಿಸಿದ್ದು ಅಲ್ಲದೆ ಭಾರತದ ಗುಣಮಟ್ಟ ಪ್ರಮಾಣಪತ್ರ ವಿಭಾಗದಿಂದ ಸೆಪ್ಟೆಂಬರ್ 1ರೊಳಗೆ ಕಡ್ಡಾಯವಾಗಿ ಸರ್ಟಿಫಿಕೇಟ್ ಪಡೆಯಬೇಕೆಂದು ಹೇಳಿರುವುದು ಚೀನಾ ದೇಶದ ಆಟಿಕೆ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ.
ವಾಣಿಜ್ಯ ಸಚಿವಾಲಯ ಹೊರಡಿಸಿರುವ ಆಟಿಕೆಗಳ(ಗುಣಮಟ್ಟ ನಿಯಂತ್ರಣ) ಆದೇಶ 2020ರ ದೇಶ ಮತ್ತು ವಿದೇಶ ಆಟಿಕೆ ಉತ್ಪಾದಕ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರು ನಗರದಲ್ಲಿ ಸುಮಾರು ಸಾವಿರ ಸಣ್ಣ ಮತ್ತು ದೊಡ್ಡ ಆಟಿಕೆ ಕಂಪೆನಿಗಳಿವೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕರ್ನಾಟಕ ಆಟಿಕೆಗಳ ಒಕ್ಕೂಟ ಅಧ್ಯಕ್ಷ ಮಂಗಲ್ ಚಂದ್ ಜೈನ್, ಭಾರತದ ಎಲೆಕ್ಟ್ರಾನಿಕ್ ಆಟಿಕೆಗಳ ಮಾರುಕಟ್ಟೆಯಲ್ಲಿ ಚೀನಾ ಕಂಪೆನಿಗಳ ಪಾರುಪತ್ಯವನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಕನಿಷ್ಠ ಶೇಕಡಾ 85ರಷ್ಟು ಎಲೆಕ್ಟ್ರಾನಿಕ್ಸ್ ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಚೀನಾದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಕೈಗೆಟಕುವ ದರಕ್ಕೆ ಸಿಗುವುದರಿಂದ ಇಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನಮ್ಮಲ್ಲಿ ಒಂದೇ ಒಂದು ಎಲೆಕ್ಟ್ರಾನಿಕ್ಸ್ ಆಟಿಕೆ ಮಾರುಕಟ್ಟೆಯಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಾಳೆಯಿಂದ ಹೊರಡಿಸಿರುವ ಕ್ರಮ ಕಟ್ಟುನಿಟ್ಟಾಗಿದ್ದು ಬಿಐಎಸ್ ಮಾರ್ಕ್ ಇರುವ ಆಟಿಕೆಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಹೇಳಿದೆ. ಇದರಿಂದ ಚೀನಾ ಕಂಪೆನಿಗಳಿಗೆ ರಫ್ತು ವೆಚ್ಚ ದುಬಾರಿಯಾಗುತ್ತಿದ್ದು ನಿಧಾನವಾಗಿ ಅವುಗಳ ಪಾರುಪತ್ಯ ನಮ್ಮ ದೇಶದ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತದೆ ಎಂದು ಜೈನ್ ವಿವರಿಸಿದರು.
ಇದಕ್ಕಾಗಿ ಭಾರತದ ಏಳು ಬಂದರುಗಳಲ್ಲಿ ಬಿಐಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಅವರು ಸ್ಯಾಂಪಲ್ ಗಳನ್ನು ತೆಗೆದುಕೊಂಡು ಚೀನಾ ಆಟಿಕೆಗಳ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದರು. ಆದರೆ ಈ ಬಗ್ಗೆ ಬಿಐಎಸ್ ಗುಣಮಟ್ಟ ಪರಿಶೀಲನೆ ಬಗ್ಗೆ ಆಟಿಕೆ ಉದ್ಯಮಿಗಳಲ್ಲಿ ಗೊಂದಲವಿದೆ.ಸರ್ಕಾರದ ನಿಯಮ ಸ್ಪಷ್ಟವಾಗಿಲ್ಲ ಎನ್ನುತ್ತಾರೆ.