ರಾಜ್ಯ

NICUನಲ್ಲಿ ಘೋರ ದುರಂತ: ಬೆಂಕಿ ಉಗುಳಿದ ಸಿಪಿಎಪಿ ಯಂತ್ರ: ನವಜಾತ ಶಿಶುವಿನ ಮೂಗು ಸುಟ್ಟು ಮುಖ ವಿಕಾರ, ತಾಯಿ ಕಣ್ಣೀರಿಗೆ ನ್ಯಾಯ ಕೊಡಿಸಿದ ಗ್ರಾಹಕರ ಆಯೋಗ..!

ಯಂತ್ರದಿಂದ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಷ್ಟರಲ್ಲಿ ಮಗುವಿನ ಮೂಗಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಇದರಿಂದ ಮಗುವಿನ ಮೂಗಿನ ಆಕಾರ ಶಾಶ್ವತವಾಗಿ ವಿರೂಪಗೊಂಡಿದ್ದು, ಮೂಗಿನ ಮೇಲೆ ಗಂಭೀರ ಕಪ್ಪು ಕಲೆಗಳು ಉಳಿದಿವೆ.

NICUನಲ್ಲಿ ಘೋರ ದುರಂತ: ಬೆಂಕಿ ಉಗುಳಿದ ಸಿಪಿಎಪಿ ಯಂತ್ರ: ನವಜಾತ ಶಿಶುವಿನ ಮೂಗು ಸುಟ್ಟು ಮುಖ ವಿಕಾರ, ತಾಯಿ ಕಣ್ಣೀರಿಗೆ ನ್ಯಾಯ ಕೊಡಿಸಿದ ಗ್ರಾಹಕರ ಆಯೋಗ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ವೈದ್ಯಕೀಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ನವಜಾತ ಶಿಶುವಿನ ಮೂಗು ಸುಟ್ಟುಹೋಗಲು ಕಾರಣವಾದ ರಾಜಾಜಿನಗರದ ಇಎಸ್‌ಐಸಿ (ESIC) ಆಸ್ಪತ್ರೆಗೆ ₹40 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ.

2022ರ ಆಗಸ್ಟ್‌ನಲ್ಲಿ ಜನಿಸಿದ್ದ ಈ ಮಗುವಿಗೆ ಹುಟ್ಟಿದ ಮೊದಲ ದಿನವೇ ಈ ದುರಂತ ಸಂಭವಿಸಿತ್ತು. ಆಸ್ಪತ್ರೆಯಲ್ಲಿದ್ದ ಸಿಪಿಎಪಿ ಯಂತ್ರದಲ್ಲಿ ತೀವ್ರ ತಾಂತ್ರಿಕ ದೋಷ ಉಂಟಾಗಿ, ಅದರ ಮೂಲಕ ಹರಿಯುತ್ತಿದ್ದ ಆಮ್ಲಜನಕದ ಉಷ್ಣಾಂಶ 69 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು ಎನ್ನಲಾಗಿದೆ.

ಯಂತ್ರದಿಂದ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಷ್ಟರಲ್ಲಿ ಮಗುವಿನ ಮೂಗಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಇದರಿಂದ ಮಗುವಿನ ಮೂಗಿನ ಆಕಾರ ಶಾಶ್ವತವಾಗಿ ವಿರೂಪಗೊಂಡಿದ್ದು, ಮೂಗಿನ ಮೇಲೆ ಗಂಭೀರ ಕಪ್ಪು ಕಲೆಗಳು ಉಳಿದಿವೆ. ಈ ಗಾಯಗಳಿಂದ ಮಗುವಿಗೆ ದೀರ್ಘಕಾಲಿಕ ದೈಹಿಕ ಹಾನಿಯಾಗಿದೆ.

ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಮಗುವಿನ ತಾಯಿ ಪವಿತ್ರಾ ಅವರು, ನವಜಾತ ಶಿಶುವಿನ ಚಿಕಿತ್ಸೆಗೆ ಬಳಸಿದ ವೈದ್ಯಕೀಯ ಉಪಕರಣಗಳ ಸುರಕ್ಷತೆ ಖಚಿತಪಡಿಸುವಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗವು, ಆಸ್ಪತ್ರೆಯು ಮಗುವಿಗೆ ₹40 ಲಕ್ಷ ಪರಿಹಾರ ನೀಡಬೇಕು ಹಾಗೂ ಈ ಮೊತ್ತಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ಪಾವತಿಸಬೇಕು ಎಂದು ಆದೇಶಿಸಿದೆ.

ಇದಲ್ಲದೆ, ಮಗುವಿನ ಮುಂದಿನ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳು ಮತ್ತು ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳ ಸಂಪೂರ್ಣ ವೆಚ್ಚವನ್ನೂ ಆಸ್ಪತ್ರೆಯೇ ಭರಿಸಬೇಕು ಎಂದು ಸೂಚಿಸಿದೆ. ಮಗುವಿನ ದೀರ್ಘಕಾಲೀನ ಆರೋಗ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ನೀಡಲಾಗಿದೆ. ಪ್ರಕರಣ ಸಂಬಂಧ ದೂರುದಾರರ ಪರ ವಕೀಲರಾದ ವರ್ಷಿತಾ ಎಸ್. ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.