ರಾಜ್ಯ

ಸಿಲಿಕಾನ್ ಸಿಟಿ ಉಡ್ತಾ ಬೆಂಗಳೂರು ಆಗಲು ನಮ್ಮ ಪೊಲೀಸ್ ಪಡೆ ಬಿಡುವುದಿಲ್ಲ: ಗೃಹ ಸಚಿವ ಬೊಮ್ಮಾಯಿ

Manjula VN

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗ ಮಾತ್ರವಲ್ಲದೇ ಬಹಳಷ್ಟು ಜನರು ಒಳಗಾಗಿದ್ದಾರೆ. ನಾವೂ ಈ ಬಾರಿ ಈ ಜಾಲದ ಮೂಲಕ್ಕೇ ಕೈ ಹಾಕಿದ್ದು, ಅದನ್ನು ಭೇಧಿಸುವಂತೆ ಸೂಚಿಸಿದ್ದೇನೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ರಾಜಧಾನಿಯನ್ನು ಉಡ್ತಾ ಬೆಂಗಳೂರು ಆಗಲು ಕೇಂದ್ರ ಮಾದಕ ವಸ್ತು ನಿಗ್ರಹ ದಳ ಬಿಡುವುದಿಲ್ಲ. ಎನ್'ಸಿಬಿಯವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ನಾಲ್ವರಿಂದ ಸಾಕಷ್ಟು ಹೆಚ್ಚಿನ ಮಾಹಿತಿ ಹೊರ ಬಂದಿದೆ. ಚಿತ್ರರಂಗದ ಕೆಲವರೂ ಇದರಲ್ಲಿ ಸೇರಿದ್ದಾರೆನ್ನುವ ಮಾಹಿತಿ ಇದೆ ಎಂದು ಹೇಳಿದ್ದಾರೆ. 

ಡ್ರಗ್ಸ್ ವ್ಯವಹಾರಕ್ಕೆ ಬಳಕೆಯಾಗುತ್ತಿದ್ದ ಡಾರ್ಕ್ ನೆಟ್ ಎನ್ನುವ ಆನ್'ಲೈನ್ ವೆಬ್'ಸೈಟ್'ನ್ನು ಭೇಧಿಸಿದ್ದೇವೆ. ಇಲ್ಲಿ ಪೋಸ್ಟಲ್ ಮೂಲಕವೂ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿಯೂ ಹೊರಬಂದಿದೆ. ಚಿತ್ರರಂಗ ಇರಲಿ, ಇನ್ನಾವುದೇ ರಂಗವಿರಲಿ. ತಪ್ಪು ಎಸಗಿದ್ದರೆ ನಾವು ಯಾರನ್ನೂ ಬಿಡುವುದಿಲ್ಲ. ಡ್ರಗ್ಸ್ ಬಗ್ಗೆ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್'ಗೆ ನೋಟಿಸ್ ನೀಡಿದ್ದೇವೆ. ಅವರು ಏನೇನು ಮಾಹಿತಿ ಕೊಡುತ್ತಾರೆಂದು ನೋಡುತ್ತೇವೆಂದು ತಿಳಿಸಿದ್ದಾರೆ. 

SCROLL FOR NEXT