ರಾಜ್ಯ

ಬೆಂಗಳೂರಿಗೆ ಎಷ್ಟು ಶೌಚಾಲಯಗಳ ಅಗತ್ಯವಿದೆ?: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ; ವರದಿ ಸಲ್ಲಿಸಲು ನಿರ್ದೇಶನ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಬಳಕೆಗೆ ಎಷ್ಟು ಶೌಚಾಲಯಗಳ ಅಗತ್ಯತೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಪ್ರಶ್ನಿಸಿದೆ.

ಬೆಂಗಳೂರಿನಲ್ಲಿ ಸಾಕಷ್ಟು ಶೌಚಾಲಯಗಳಿಲ್ಲ ಮತ್ತು ಈಗಿರುವ ಶೌಚಾಲಯಗಳನ್ನೂ ಕೂಡ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು  ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಬಿಬಿಎಂಪಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಎಷ್ಟು ಕಡೆ ಅಗತ್ಯವಿದೆ ಎಂಬುದರ ಕುರಿತು ಸಮಗ್ರ ಅಧ್ಯಯನ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್  ನಿರ್ದೇಶನ ನೀಡಿದೆ.

ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದ್ದು, ಶೌಚಾಲಯಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ ಪೀಠ, ವರದಿ  ಸಲ್ಲಿಸಲು ಪಾಲಿಕೆಗೆ ಸಮಯಾವಕಾಶ ನೀಡಿತು. 2021 ರ ಜನವರಿ 9 ರ ಮೊದಲು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತು. ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಒದಗಿಸಲಾದ ಸೌಲಭ್ಯಗಳು ಮತ್ತು ಸ್ವಚ್ಛತೆ ಮತ್ತು  ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗಿದೆಯೇ ಎಂಬ ವಿವರಗಳನ್ನು ಹೊಂದಿರಬೇಕು ಎಂದೂ ಹೇಳಿದೆ. 

ಜನವರಿ 9 ರಂದು ಅಥವಾ ಅದಕ್ಕೂ ಮೊದಲು ಬಿಬಿಎಂಪಿ ಸಲ್ಲಿಸುವ ಯೋಜನೆಯನ್ನು ಪರಿಶೀಲಿಸಿದ ನಂತರ ಈ ಯೋಜನೆಯನ್ನು ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದಾಗಿ ನ್ಯಾಯಪೀಠ ಸೂಚಿಸಿದೆ.  ಬೆಂಗಳೂರಿನಲ್ಲಿ ಪಾವತಿ ಮತ್ತು  ಉಚಿತ ಬಳಕೆಯ ಶೌಚಾಲಯಗಳನ್ನು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸೂಚಿಸಲಾದ ಮಾರ್ಗಸೂಚಿಗಳ ಪ್ರಕಾರ ಆ ಶೌಚಾಲಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದೂ ನ್ಯಾಯಪೀಠ ಹೇಳಿದೆ.

ಸ್ವಚ್ಚ ಭಾರತ್ ಮಿಷನ್‌ನ ಮಾರ್ಗಸೂಚಿಗಳ ಪ್ರಕಾರ ಬೆಂಗಳೂರಿಗೆ 1,100 ಸಾರ್ವಜನಿಕ ಶೌಚಾಲಯಗಳು ಮತ್ತು ಪ್ರತಿ 7 ಕಿ.ಮೀ.ಗೆ ಶೌಚಾಲಯ ಸಂಕೀರ್ಣವನ್ನು ಸ್ಥಾಪಿಸಬೇಕು ಎಂದು ಅರ್ಜಿದಾರರು ವಾದಿಸಿದರು. ಆದರೆ, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ  ಪ್ರಕಾರ, 1965 ಮತ್ತು 2014 ರ ನಡುವೆ ಬೆಂಗಳೂರಿನಲ್ಲಿ ಕೇವಲ 479 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
 

SCROLL FOR NEXT