ರಾಜ್ಯ

ಬಿಜೆಪಿ ಶಾಸಕ ಎಳೆದಾಡಿದ್ದರಿಂದ ವೈದ್ಯರ ಸಲಹೆ ಮೇರೆಗೆ ಗರ್ಭಪಾತ - ಪುರಸಭೆ ಸದಸ್ಯೆ ಆರೋಪ

Nagaraja AB

ಬೆಂಗಳೂರು: ಬಿಜೆಪಿ ಶಾಸಕ ತಮ್ಮನ್ನು ಎಳೆದಾಡಿದ್ದರಿಂದ ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಪುರಸಭೆ ಸದಸ್ಯೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.

ನವೆಂಬರ್ 9ರಂದು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಚಾಂದಿನಿ ನಾಯಕ್  ಪುರಸಭೆ ಕಟ್ಟಡಕ್ಕೆ ತೆರಳುತ್ತಿರುವಾಗ ಮುಖ್ಯಗೇಟ್ ನಲ್ಲಿ ಅವರನ್ನು ತಡೆದ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಎಳೆದಾಡಿದ್ದ ಆರೋಪ ಕೇಳಿಬಂದಿತ್ತು. ಪುರಸಭೆ ಕಟ್ಟಡದ ಪ್ರವೇಶದ್ವಾರದಲ್ಲಿಯೇ ತಮ್ಮನ್ನು ಎಳೆದಾಡಿ ನೂಕಲಾಗಿತ್ತು ಎಂದು ಚಾಂದಿನಿ ನಾಯಕ್ ಹೇಳಿದ್ದಾರೆ. 

ಮಹಿಳೆಯೊಂದಿಗೆ ಶಾಸಕರು ನಡೆದುಕೊಂಡ ರೀತಿ ಸರಿಯಿರಲಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಬಿ. ಟಿ ರಕ್ಷಿತಾ ಆರೋಪಿಸಿದ್ದಾರೆ. ಆದಾಗ್ಯೂ, ಈ ಆರೋಪವನ್ನು ತಳ್ಳಿ ಹಾಕಿರುವ ಸಿದ್ದು ಸವದಿ, ಚಾಂದಿನಿ ನಾಯಕ್ ಆರು ವರ್ಷಗಳ ಹಿಂದೆಯೇ ಟ್ಯೂಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಗರ್ಭಪಾತ ಪ್ರಕರಣಗಳು ಆಗದಿರುವ ಬಗ್ಗೆ ಜಿಲ್ಲಾ ಆಸ್ಪತ್ರೆ ವೈದ್ಯರು ತಮ್ಮಗೆ ಹೇಳಿರುವುದಾಗಿ ಸಿದ್ದು ಸವದಿ ತಿಳಿಸಿದ್ದಾರೆ.

ಬಿಜೆಪಿಯಿಂದ ಟಿಕೆಟ್ ನೀಡಲು ನಿರಾಕರಿಸಿದ ನಂತರ  ಕಾಂಗ್ರೆಸ್  ಬೆಂಬಲದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದ ಬಿಜೆಪಿಯ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ ಮತ್ತು ಗೋದಾವರಿ ಅವರನ್ನು  ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು  ಎಳೆದಾಡಿದ್ದರು.

SCROLL FOR NEXT