ರಾಜ್ಯ

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಕರೆ ಹಿನ್ನೆಲೆ: ರಾಜ್ಯಾದ್ಯಂತ ಕಟ್ಟೆಚ್ಚರ

Vishwanath S

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ. ಕೆಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡದೆ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಾತ್ರ ಬೆಂಬಲ ನೀಡಿದೆ. ಹಾಗಾಗಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು‌ ಕಳೆದೊಂದು ವಾರದಿಂದ ಅತ್ತಿಬೆಲೆ ಗಡಿ ಬಂದ್, ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್.ಪುರದಲ್ಲಿ ಪ್ರತಿಭಟನೆ ನಡೆಸಿ ಜನ ಬೆಂಬಲ ಗಳಿಸಲು ಪ್ರಯತ್ನಿಸಿವೆ.
ನಗರದ ಪುರಭವನದ ಬಳಿ‌ ಪ್ರತಿಭಟನಕಾರರು ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಅಲ್ಲದೇ ಮೇಖ್ರಿ ವೃತ್ತದಿಂದ ಆನಂದರಾವ್ ವೃತ್ತ ದವರೆಗೆ ರ್ಯಾ ಲಿ ನಡೆಸಲಿದ್ದಾರೆ. ಮೆರವಣಿಗೆಗೆ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಪರಿಸ್ಥಿತಿಯ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಾಲೂಕುಗಳಲ್ಲಿ ತಹಶೀಲ್ದಾರ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಹೋರಾಟಗಾರರು ತೀರ್ಮಾನಿಸಿದ್ದಾರೆ. ವೈದ್ಯಕೀಯ ಸೇವೆ, ಔಷಧ ಅಂಗಡಿ, ಹಾಲು, ದಿನಪತ್ರಿಕೆ ಇನ್ನಿತರ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವುದಿಲ್ಲ. ಚಾಲಕರ ಸಂಘ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ಆಟೋ, ಓಲಾ-ಊಬರ್ ಕ್ಯಾಬ್ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ. ಬೀದಿ ಬದಿ ವ್ಯಾಪಾರಿಗಳ ಸಂಘ ಬಂದ್ ಗೆ ಬೆಂಬಲ ನೀಡಿಲ್ಲ. ಹಾಗಾಗಿ ಬೀದಿ ಬದಿ ವ್ಯಾಪಾರ ನಿರಾತಂಕವಾಗಿ ನಡೆಯುವ ಸಾಧ್ಯತೆ ಇದೆ.

ಕರವೇ ಅಧ್ಯಕ್ಷ ನಾರಾಯಣ ಗೌಡ ಬೆಂಗಳೂರಿನಲ್ಲಿಂದು ಮಾತನಾಡಿ, ಎಂಇಎಸ್ ಶಾಸಕರು ಕನ್ನಡ ವಿರೋಧಿ ಹೇಳಿಕೆ, ಕನ್ನಡಿಗರಿಗೆ ಮಸಿ ಬಳಿಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಂಥವರ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ಹೊರಟಿರುವುದು ಸರಿಯಲ್ಲ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕರ್ನಾಟಕ ಬಂದ್ ನಡೆಯಲು ಸರ್ಕಾರವೇ ಕಾರಣವಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ಬಂದ್ಗೆ ನೈತಿಕ ಬೆಂಬಲ ಸೂಚಿಸಲಾಗಿದ್ದು, ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಕೆಲಸ ಮಾಡುವುದಿಲ್ಲ. ಉಪವಾಸ ಸತ್ಯಾಗ್ರಹ, ಗಡಿಬಂದ್, ಶಾಂತಿಯುತವಾಗಿ ರ್ಯಾ ಲಿ ಮಾಡಲು ನಿರ್ಧರಿಸಲಾಗಿದೆ. ಬಳಿಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಕೂಡ ಸ್ಪಷ್ಟಪಡಿಸಿದೆ.

ಬಂದ್ ವೇಳೆ ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿಗಮದ ವಿಭಾಗದ ಕಚೇರಿ, ಘಟಕ, ಕಾರ್ಯಾಗಾರ, ಬಸ್ ನಿಲ್ದಾಣಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಜತೆ ಸಂಪರ್ಕದಲ್ಲಿರಬೇಕು ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಪಡೆಯಬೇಕು ಎಂದು ತಿಳಿಸಿದ್ದಾರೆ.

ಕಮೀಷನರ್ ಸೂಚನೆ:
ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆ, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ನಗರದಾದ್ಯಂತ ಇಂದು ಮಧ್ಯರಾತ್ರಿಯಿಂದಲೇ ಬಿಗಿ ಪೊಲೀಸ್ ಭದ್ರತೆ ಕೈಗೊಂಡು ಗಸ್ತು ಹೆಚ್ಚಿಸಿ ಎಲ್ಲಾ ರೀತಿಯ ಮುಂಜಾಗ್ರತಾ ‌ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ನಗರದ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಬೇಕು ಜನ ಸಂದಣಿಯ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗುವುದು ಎಂದರು.

ಬಂದ್ ಹಿನ್ನೆಲೆಯಲ್ಲಿ ಕೂಡ ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ. ಸಮಾಜಘಾತುಕ ಕೃತ್ಯಕ್ಕೆ ಕೈ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬಂದ್ ಗೆ ಇಲಾಖೆಯಿಂದ ಯಾರೂ ಅನುಮತಿ ಪಡೆದಿಲ್ಲ, ಅನುಮತಿ ನೀಡಿಯೂ ಇಲ್ಲ ಎಂದು ಕಮಲ್ ಪಂತ್ ಸ್ಪಷ್ಪಪಡಿಸಿದ್ದಾರೆ.

SCROLL FOR NEXT