ರಾಜ್ಯ

ಆನ್ ಲೈನ್ ತರಗತಿಗಳಲ್ಲಿ ಸಮಸ್ಯೆ ಹೆಚ್ಚು; ಶಾಲೆಗಳು ಪುನಾರಂಭಕ್ಕೆ ವಿದ್ಯಾರ್ಥಿಗಳ ಒಲವು!

Srinivas Rao BV

ಬೆಂಗಳೂರು: ಕೋವಿಡ್-19 ಕಾರಣದಿಂದ ನಡೆಸಲಾಗುತ್ತಿರುವ ಆನ್ ಲೈನ್ ತರಗತಿಗಳು, ಚಂದನ ಟಿವಿ ಮೂಲಕ ನಡೆಸಲಾಗುತ್ತಿರುವ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕೊರತೆ ಕಾಡುತ್ತಿದ್ದು, ಶಾಲೆಗಳ ಪುನಾರಂಭಕ್ಕೆ ಒತ್ತಾಯಿಸುತ್ತಿದ್ದಾರೆ. 

ಪ್ರಮುಖವಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶಾಲೆಗಳ ಪುನಾರಂಭಕ್ಕೆ ಹೆಚ್ಚು ಒತ್ತಾಯಿಸುತ್ತಿದ್ದು, ಆನ್ ಲೈನ್ ಗಿಂತಲೂ ನೇರವಾಗಿ ಶಾಲೆಗೆ ಹೋಗಿ ಕಲಿಯುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, "ಶಿಕ್ಷಕರು ಎದುರಿದ್ದರೆ ಪಾಠಗಳು ಉತ್ತಮವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನಮಗೆ ಶಾಲೆಗಳು ಪುನಾರಂಭಗೊಳ್ಳಬೇಕಿದೆ" ಎಂದು ಹೇಳಿದ್ದಾರೆ.

ಚಂದನ ಟಿವಿಯ ಮೂಲಕ ನಡೆಸಲಾಗುತ್ತಿರುವ ತರಗತಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ, ಶಾಲೆಗಳನ್ನು ಪುರಾಂಭ ಮಾಡಿ, ಆಗ ಸ್ನೇಹಿತರೊಂದಿಗೂ ಕಲಿಯಬಹುದು ಎನ್ನುತ್ತಾರೆ ಸರ್ಕಾರಿಯ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮತ್ತೋರ್ವ ವಿದ್ಯಾರ್ಥಿ.

ಶಾಲೆಗಳು ಪುನಾರಂಭಗೊಳ್ಳದೇ ಹೋದಲ್ಲಿ ವಿದ್ಯಾರ್ಥಿಗಳ ಮಾನಸಿಕ-ಸಾಮಾಜಿಕ ಬೆಳವಣಿಗೆ ಮೇಲೆ ಅದು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ಈಗಾಗಲೇ ಹಲವು ಬಾರಿ ಎಚ್ಚರಿಸಿದ್ದಾರೆ. 

ಸರ್ಕಾರಿ ಶಾಲಾ ಮಕ್ಕಳಿಗಾಗಿ ಪ್ರಾರಂಭ ಮಾಡಲಾಗಿದ್ದ ವಿದ್ಯಾಗಮ ಯೋಜನೆಯ ಭಾಗವಾಗಿರುವ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಸಹ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಶಾಲೆಗಳನ್ನು ಪುನಾರಂಭ ಮಾಡಲು ಮನವಿ ಮಾಡಿದ್ದಾರೆ.

"ಮಕ್ಕಳ ಸುರಕ್ಷತೆ ಹಾಗೂ ಅವರ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಡಿ.15 ರೊಳಗೆ ಪುನಾರಂಭ ಮಾಡಬೇಕು" ಎಂದು ಆರಾಧ್ಯ ಅವರು ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. 

ಇದೇ ವೇಳೆ ಕೆಲವು ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿಗಳೂ ಸಹ ಶಾಲೆಗಳನ್ನು ಪುನಾರಂಭಗೊಳಿಸುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ  ಆನ್ ಲೈನ್ ಚಳುವಳಿಯನ್ನು ಪ್ರಾರಂಭಿಸಿದ್ದಾರೆ.

ಇನ್ನು ಡಿಸೆಂಬರ್ ಅಂತ್ಯದ ವೇಳೆಗೆ ಶಾಲೆಗಳನ್ನು ಪ್ರಾರಂಭಿಸದೇ ಇರುವ ಸರ್ಕಾರದ ನಿರ್ಧಾರವನ್ನು ಸಿಐಎಸ್ಇಸಿ ಮಂಡಳಿ ಸಹ ಸ್ವಾಗತಿಸಿಲ್ಲ. ಜ.04 ರಂದು ಶಾಲೆಗಳನ್ನು ಪುನಾರಂಭಗೊಳಿಸಬೇಕೆಂದು ಮಂಡಳಿ ಹೇಳಿದೆ.

"ವಯಸ್ಸು, ಪ್ರದೇಶ, ಸಂಪನ್ಮೂಲ ಈ ಮೂರನ್ನೂ ಆಧಾರವಾಗಿಟ್ಟುಕೊಂಡು ಪುನಾರಂಭಗೊಳಿಸಲು ಸಿದ್ಧವಿರುವ ಶಾಲೆಗಳಿಗೆ ಅವಕಾಶ ನೀಡಬೇಕು" ಎಂದು ನೀವ್ ಅಕಾಡೆಮಿ (Neev Academy) ಯ ಸ್ಥಾಪಕರು, ಮುಖ್ಯಸ್ಥರಾದ ಕವಿತಾ ಗುಪ್ತಾ ಸಭರ್ವಾಲ್ ಹೇಳುತ್ತಾರೆ.

ಸಾಫ್ಟ್ ಲಾಕ್ ಡೌನ್ ಘೋಷಿಸಿರುವ ಹಲವು ರಾಷ್ಟ್ರಗಳು ಶಾಲೆಗಳನ್ನು ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಅವರು ಶಾಲೆಗಳನ್ನು ನಡೆಸುತ್ತಿದ್ದಾರೆ. ನಾವೂ ಸಹ ಈಗ ಅದರೆಡೆಗೆ ನಡೆಯಬೇಕು, ಸಾಮರ್ಥ್ಯವಿರುವ ಶಾಲೆಗಳಿಗೆ ಪುನಾರಂಭಗೊಳಿಸುವುದಕ್ಕೆ ಅನುಮತಿ ನೀಡಬೇಕು. ಮಧ್ಯಪ್ರದೇಶದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 1-8 ತರಗತಿಗಳನ್ನು ಪ್ರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ ಎಂದು ಕವಿತಾ ಗುಪ್ತಾ ಸಭರ್ವಾಲ್ ಹೇಳಿದ್ದಾರೆ.

"ಲಸಿಕೆ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಪೋಷಕರಿಗೂ ಭಯವಿದೆ. ವಿದ್ಯಾರ್ಥಗಳು ಹಾಗೂ ಶಿಕ್ಷಕರ ಸುರಕ್ಷತೆ ದೃಷ್ಟಿಯಿಂದ ನಾವು ಆನ್ ಲೈನ್ ತರಗತಿಗಳನ್ನೇ ಮುಂದುವರೆಸಲು ಇಚ್ಛಿಸುತ್ತೇವೆ. ಆದರೆ ಸರ್ಕಾರ ಆದೇಶ ನೀಡಿದಲ್ಲಿ ಶಾಲೆ ಪುನಾರಂಭ ಮಾಡುತ್ತೇವೆ ಎಂದು ಬಿಟಿಎಂ ಲೇಔಟ್ ನ ಆರ್ಕಿಡ್ಸ್-ದಿ ಇಂಟರ್ನ್ಯಾಷನಲ್ ಸ್ಕೂಲ್ಸ್ ನ ಪ್ರಾಂಶುಪಾಲರಾದ ಮಂಜುಳ ಹೇಳುತ್ತಾರೆ.

SCROLL FOR NEXT