ರಾಜ್ಯ

ಬಳ್ಳಾರಿಯ ಮಡೆರೆ ಗ್ರಾಮಸ್ಥರ ಪಾಡು ಕೇಳುವವರಿಲ್ಲ: ಮೃತರ ಶವಸಂಸ್ಕಾರ ಮಾಡಲು ಹೊಳೆ ದಾಟಿ ಹೋಗಬೇಕು!

Sumana Upadhyaya

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲ್ಲೂಕಿನ ಮಡೆರೆ ಗ್ರಾಮದಲ್ಲಿ ಯಾರಾದರೂ ತೀರಿಹೋದರೆ ಮನೆಯವರಿಗೆ ತಮ್ಮವರನ್ನು ಕಳೆದುಕೊಂಡ ದುಃಖ ಮಾತ್ರವಲ್ಲದೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ಸಾಗಿಸಲು ವಿಪರೀತ ಕಷ್ಟಪಡಬೇಕಾಗುತ್ತದೆ.

ನೀರು ಹರಿದುಹೋಗುವ ಹೊಳೆಯಲ್ಲಿ ಶವವನ್ನು ಹೊತ್ತುಕೊಂದು ದಾಟಿಹೋಗಬೇಕಾಗಿದ್ದು ಮಳೆಗಾಲದಲ್ಲಿ ಇವರ ಪಾಡು ಹೇಳತೀರದು. ಮುಂದಿನ ಮಳೆಗಾಲದೊಳಗೆ ಇದಕ್ಕೆ ಏನಾದರೊಂದು ಪರಿಹಾರ ಕಂಡುಹಿಡಿಯಿರಿ ಎಂದು ಗ್ರಾಮಸ್ಥರು ಆಡಳಿತಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ. 

ಈ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆಯಿದೆ. ಅಭಿವೃದ್ಧಿಯಲ್ಲಿ ಹಲವು ವರ್ಷಗಳಿಂದ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ. ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದರೂ ಕೂಡ ಶವಗಳ ಅಂತ್ಯಸಂಸ್ಕಾರಕ್ಕೆ ಬೇರೆ ಸ್ಥಳವನ್ನು ಇದುವರೆಗೆ ಗುರುತಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಗ್ರಾಮದಲ್ಲಿ ಯಾರಾದರೂ ತೀರಿಹೋದರೆ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಪ್ರತಿವರ್ಷ ಕೂಡ ಇದೇ ಪರಿಸ್ಥಿತಿ. ಮಳೆಗಾಲ ಬಂದಾಗ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ ಗ್ರಾಮದಲ್ಲಿ ಶವಸಂಸ್ಕಾರ ಮಾಡುತ್ತದೆ. ಶಾಶ್ವತ ಅಂತ್ಯಸಂಸ್ಕಾರ ಸ್ಥಳವನ್ನು ಇದುವರೆಗೆ ನಿಗದಿಪಡಿಸಿಲ್ಲ ಎಂದು ಗ್ರಾಮಸ್ಥ ನಾಗಪ್ಪ ಹೆಚ್ ಆರೋಪಿಸುತ್ತಾರೆ. 

ಈಗ ಅಂತ್ಯಸಂಸ್ಕಾರ ನಡೆಯುವ ಸ್ಥಳ ತೀರಾ ಕಿರಿದಾಗಿದೆ. ಸರ್ಕಾರಕ್ಕೆ ಸೇರಿದ ಸ್ಥಳ ಗ್ರಾಮದಿಂದ ಹೊರಗೆ ಬೇರೆಲ್ಲೂ ಇಲ್ಲ. ಹೊಳೆಗೆ ಸೇತುವೆ ನಿರ್ಮಿಸಿ ಅಂತ್ಯಸಂಸ್ಕಾರಕ್ಕೆ ಸ್ಥಳ ಗುರುತಿಸಿ ಎಂದು ಅಧಿಕಾರಿಗಳನ್ನು ಕೇಳುತ್ತೇವೆ ಎಂದು ಮತ್ತೊಬ್ಬ ಗ್ರಾಮಸ್ಥ ಹೇಳುತ್ತಾರೆ.

SCROLL FOR NEXT