ರಾಜ್ಯ

ಗ್ರಾ.ಪಂ.ಚುನಾವಣೆ: ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆದರೆ ಕ್ರಮ- ಆಯೋಗ ಎಚ್ಚರಿಕೆ 

Nagaraja AB

ಬೆಂಗಳೂರು: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರಗಳನ್ನು ಸ್ವಯಂ ಪ್ರೇರಣೆಯಿಂದ ಹಿಂಪಡೆಬೇಕು. ಒತ್ತಡಕ್ಕೆ ಮಣಿದು ಹಿಂದೆ ಪಡೆದಿದ್ದರೆ ಅಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸದಸ್ಯತ್ವವನ್ನು ಹರಾಜು ಹಾಕುತ್ತಿರುವ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ,  ಸ್ವರ್ಧಿಸುವ  ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಿದ್ದಲ್ಲಿ ಅವರು ಯಾವುದೇ ಒತ್ತಡ, ಅಮೀಷಗಳಿಗೆ ಒಳಗಾಗದೆ ನ್ಯಾಯಯುತವಾಗಿ ಹಾಗೂ ಕ್ರಮವಾಗಿ ಹಿಂಪಡೆಯುತ್ತಿರುವವರೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು ರೀತಿಯಲ್ಲಿ ಉಮೇದುವಾರಿಕೆಯನ್ನು ಅಭ್ಯರ್ಥಿಯು ಖುದ್ದಾಗಿ ಅಥವಾ ಅವನ ಸೂಚಕನ ಮೂಲಕವಾಗಲೀ, ಅಥವಾ  ಅಂಥ ಅಭ್ಯರ್ಥಿಯಿಂದ ಇದಕ್ಕಾಗಿ ಅಧಿಕೃತಗೊಳಿಸಲಾದ ಏಜೆಂಟ್ ಮೂಲಕವಾಗಲೀ ಹಿಂತೆಗೆದುಕೊಳ್ಳಲು ಅವಕಾಶವಿರುತ್ತದೆ.  

ಈ ಸಂದರ್ಭದಲ್ಲಿ ಹಿಂತೆಗೆದುಕೊಳ್ಳುವ ನೋಟಿಸನ್ನು ಅಭ್ಯರ್ಥಿಯು ಯಾವುದೇ ಒತ್ತಡವಿಲ್ಲದೇ ಸ್ವಇಚ್ಛೆಯಿಂದ ನೀಡುತ್ತಿರುವ ಹಾಗೂ ನೈಜತೆಯ ಬಗ್ಗೆ ತೃಪ್ತಿಯಾದ ಮೇಲೆ ಅಂಗೀಕರಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಕ್ತ ಸೂಚನೆಯನ್ನು ನೀಡುವಂತೆ ತಿಳಿಸಿದ್ದಾರೆ.

SCROLL FOR NEXT