ಬೆಂಗಳೂರು: ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ಪೋಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ದಂಪತಿ ಶುಕ್ರವಾರ ಮುಂಜಾನೆ ತಮ್ಮ ಮನೆಯಲ್ಲಿ ನೇಣಿಗೆ ಶರಣಗಿದ್ದಾರೆ.
ಮೃತರನ್ನು ಎಚ್.ಸಿ. ಸುರೇಶ್ ಹಾಗೂ ಶೀಲಾ ಎಂದು ಗುರುತಿಸಲಾಗಿದೆ. ಶೀಲಾ ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಪತಿ ಸುರೇಶ್ ಎಸಿಪಿ ಕಚೇರಿಯಲ್ಲಿ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಸುರೇಶ್ ಹಾಗೂ ಶೀಲಾ ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ದಂಪತಿಗಳಿಗೆ ಮಕ್ಕಳಿರಲಿಲ್ಲ.
ನಿನ್ನೆ ರಾತ್ರಿ ಸುರೇಶ್ ಎಸಿಪಿ ಕಚೇರಿಯಲ್ಲಿ ನಡೆದ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ಆ ನಂತರದಲ್ಲಿಯೂ ಲವಲವಿಕೆಯಿಂಡ ಇದ್ದರಾದರೂ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಅವರ ಸಹೋದ್ಯೋಗಿಗಳಿಗೆ ಆಘಾತ ತಂದಿದೆ.
ದಂಪತಿಗಳ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ.ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.