ರಾಜ್ಯ

ಬೆಂಗಳೂರು ಗಲಭೆ ಪ್ರಕರಣ: ಎನ್‍ಐಎಯಿಂದ ಎಸ್‌ಡಿಪಿಐ, ಪಿಎಫ್‌ಐನ 17 ಆರೋಪಿಗಳ ಬಂಧನ

Vishwanath S

ನವದೆಹಲಿ: ಕಳೆದ ಆಗಸ್ಟ್ 11 ರಂದು ಬೆಂಗಳೂರಿನ ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿಂಸಾತ್ಮಕ ದಾಳಿ ಮತ್ತು ಭಾರೀ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಎಸ್‌ಡಿಪಿಐ ಮತ್ತು ಪಿಎಫ್‌ಐನ 17 ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ತನಿಖಾ ಸಂಸ್ಥೆ(ಎನ್‌ಐಎ) ತಿಳಿಸಿದೆ.

ಪುಲಕೇಶಿ ನಗರದ ಕಾಂಗ್ರೆಸ್‍ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್ ಕಳುಹಿಸಿದ್ದ ಫೇಸ್ ಬುಕ್ ಪೋಸ್ಟ್ ಹಿನ್ನೆಲೆಯಲ್ಲಿ ಗಲಭೆಗಳು ನಡೆದಿದ್ದವು.

ಈ ಪ್ರಕರಣ ಮೂಲತಃ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಸೆ 21 ರಂದು ಎನ್‍ಐಎ ಈ ಪ್ರಕರಣವನ್ನು ವಹಿಸಿಕೊಂಡು ತನಿಖೆ ಆರಂಭಿಸಿತ್ತು.

ಎಸ್ ಡಿಪಿಐ ನಾಯಕ, ಕೆಜೆ ಹಳ್ಳಿ ವಾರ್ಡ್ ನ ಅಧ್ಯಕ್ಷ ಇಮ್ರಾನ್ ಅಹ್ಮದ್, ರುಬಾ ವಕಾಸ್, ನಾಗವಾರ ವಾರ್ಡ್ ನ ಎಸ್ ಪಿಡಿಐ ಅಧ್ಯಕ್ಷ ಅಬ್ಬಾಸ್ ಆತನ ಸಹಚರರಾದ ಅಜಿಲ್ ಪಾಷಾ, ಇರ್ಫಾನ್ ಖಾನ್ ಮತ್ತು ಅಕ್ಬರ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ. 

ಬೆಂಗಳೂರು ಹಿಂಸಾಚಾರಕ್ಕೂ ಮುನ್ನ ಆಗಸ್ಟ್ 11ರ ಸಂಜೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಮತ್ತು ಕೆಜಿ ಹಳ್ಳಿ ವಾರ್ಡ್ ಗಳಲ್ಲಿ ನಡೆದ ಸಭೆಗಳಲ್ಲಿ ಪಿತೂರಿ ನಡೆಸಿ, ಗಲಭೆಗೆ ಜನರನ್ನು ಸಜ್ಜುಗೊಳಿಸಿದ್ದಾರೆ. 

ಇನ್ನು ಆರೋಪಿಗಳಾದ ಸದ್ದಾಂ, ಸಯೀದ್ ಸೊಹೆಲ್, ಕಲೀಮುಲ್ಲಾ ಅಲಿಯಾಸ್ ಶಾರುಖ್ ಖಾನ್ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ವಾಟ್ಸ್ ಆ್ಯಪ್ ಮೂಲಕ ಕೃತ್ಯಕ್ಕೆ ಪ್ರಚೋದನೆ ನೀಡಿ ಜನರು ಸೇರುವಂತೆ ಮಾಡಿದ್ದರು ಎಂದು ಎನ್ಐಎ ಹೇಳಿದೆ. 

SCROLL FOR NEXT