ರಾಜ್ಯ

ನಿಗದಿಯಂತೆ ಜನವರಿ 1ರಿಂದ 10, 12ನೇ ತರಗತಿ ಆರಂಭ: ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ

Manjula VN

ಬೆಂಗಳೂರು: ನಿಗದಿಯಂತೆಯೇ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ತಿಳಿಸಿದ್ದಾರೆ. 

ಶಾಲಾ ಕಾಲೇಜು ಪ್ರಾರಂಭದ ಕುರಿತು ಇಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಚರ್ಚೆ ಬಳಿಕ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಶಾಲೆ ಆರಂಭ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸಭೆಯಲ್ಲಿ ಪ್ರಸ್ತುತ ಶಾಲೆ-ಕಾಲೇಜುಗಳ ಆರಂಭಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದು, ಹೀಗಾಗಿ ಶಾಲೆ ಮತ್ತು ಕಾಲೇಜುಗಳ ಪ್ರಾರಂಭ ಮಾಡಲು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ, ಸಚಿವ ಸುರೇಶ್ ಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 

ಸಭೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದು, ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಎಲ್ಲಾ ನಿಯಮಗಳೂ ಪಾಲನೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆxದು ತಿಳಿದುಬಂದಿದೆ. 

ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಜತೆ ಸೇರಿ ಕೆಲಸ ಮಾಡಿ. ಶಾಲಾ-ಕಾಲೇಜು ಪ್ರಾರಂಭದಲ್ಲಿ ಸಮಸ್ಯೆಯಾಗಬಾರದು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ನಿಗಾವಹಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿಎಸ್‌ವೈ ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆನ್ನಲಾಗಿದೆ. 

SCROLL FOR NEXT