ರಾಜ್ಯ

ಸಕಲ ಸರ್ಕಾರಿ ಗೌರವಗಳೊಂದಿಗೆ ಧರ್ಮೇಗೌಡ ಪಾರ್ಥೀವ ಶರೀರದ ಅಂತ್ಯಸಂಸ್ಕಾರ

Srinivasamurthy VN

ಚಿಕ್ಕಮಗಳೂರು: ಕಳೆದ ರಾತ್ರಿ ಅಸಹಜವಾಗಿ ಸಾವನ್ನಪ್ಪಿದ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಸಖರಾಯಪಟ್ಟಣದ ಅವರ ತೋಟದಲ್ಲಿ ಮಂಗಳವಾರ ಸಂಜೆ ನಡೆಯಿತು.

ಎಸ್.ಎಲ್.ಧರ್ಮೇಗೌಡ ಅವರ ಪಾರ್ಥಿವ ಶರೀರವಿದ್ದ ಚಿತೆಗೆ ಪುತ್ರ ಸೋನಾಲ್ ಅಗ್ನಿಸ್ಪರ್ಶ ಮಾಡಿದರು. ಒಕ್ಕಲಿಗ ಸಮುದಾಯದ ವಿಧಿವಿಧಾನದಂತೆ ಶವಸಂಸ್ಕಾರವನ್ನು ಕುಟುಂಬಸ್ಥರು, ರಾಜಕೀಯ ಪಕ್ಷಗಳ ಹಿರಿಯ ನಾಯಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ತಂದೆ ಚಿತೆಗೆ ಪುತ್ರ ಎಸ್.ಡಿ.ಸೋನಾಲ್ ಅಗ್ನಿ ​ಸ್ಪರ್ಶ ಮಾಡಿದರು. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನವಾದರು. ಅಂತ್ಯಸಂಸ್ಕಾರಕ್ಕೂ ಮುನ್ನ ಸಖರಾಯಪಟ್ಟಣದ ಕಾಲೇಜು ಆವರಣದಲ್ಲಿ ಧರ್ಮೇಗೌಡರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಮಾಜಿ  ಸಿಎಂ ಎಚ್​ಡಿ ಕುಮಾರಸ್ವಾಮಿ ಹಾಜರಿದ್ದರು. ಧರ್ಮೇಗೌಡರಿಗೆ ಗಣ್ಯಾತಿಗಣ್ಯರು, ಮಠಾಧೀಶರು, ಕುಟುಂಬ ಸದಸ್ಯರು, ಬಂಧುಗಳು, ಗ್ರಾಮಸ್ಥರ ಅಶ್ರುತರ್ಪಣ ಅರ್ಪಿಸಿದರು. ಇನ್ನು ಅಂತ್ಯ ಸಂಸ್ಕಾರದ ವೇಳೆ ಅಪಾರ ಸಂಖ್ಯೆಯಲ್ಲಿ ಸಂಬಂಧಿಕರು, ಬಂಧುಗಳು ನೆರೆದಿದ್ದರು.

ಧರ್ಮೇಗೌಡ ಅವರು ಸೋಮವಾರ ರಾತ್ರಿ ಕಡೂರು ತಾಲೂಕಿನ ಗುಣಸಾಗರದ ಗ್ರಾಮದ ವ್ಯಾಪ್ತಿಯ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ತಡರಾತ್ರಿ 2.30ರ ಸಮಯದಲ್ಲಿ ವೇಳೆಗೆ ತಿಳಿಯುತ್ತಿದ್ದಂತೆ ಪೋಲೀಸ್ ವರಿಷ್ಠಾಧಿಕಾರಿ ಎಚ್.ಎಂ.ಅಕ್ಷಯ್, ಜಿಲ್ಲಾಧಿಕಾರಿ ಬಗಾದಿ ಗೌತಮ್,  ಸಿ.ಟಿ.ರವಿ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
 

SCROLL FOR NEXT