ರಾಜ್ಯ

ವಲಸಿಗರನ್ನು ಪತ್ತೆ ಹಚ್ಚಲು ಹೊಸ ಕಾನೂನು ಅಗತ್ಯವಿಲ್ಲ, ಸದ್ಯದ ಕಾನೂನು ಸಾಕು: ಪ್ರಶಾಂತ್ ಭೂಷಣ್

Srinivasamurthy VN

ಬೆಂಗಳೂರು: ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಹೊಸ ಕಾನೂನಿನ ಅಗತ್ಯವಿಲ್ಲ. ಈಗ ಇರುವ ಕಾನೂನುಗಳೇ ಸಾಕು ಎಂದು ಸಾಮಾಜಿಕ ಹೋರಾಟಗಾರ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬೆಂಗಳೂರು ಅಡ್ವೊಕೇಟ್ ಫೋರಂ ವತಿಯಿಂದ ಶನಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸುವುದು, ಮಾರಕಾಸ್ತ್ರಗಳಿಂದ ಹಲ್ಲೆಗಳು ನಡೆಸುವುದು ಸೇರಿದಂತೆ ಹಾಡಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದರೂ ಸರ್ಕಾರ ಮತ್ತು ನ್ಯಾಯಾಲಯ ಮೌನ ವಹಿಸಿರುವುದು ದುರದೃಷ್ಟಿಕರ. ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ ಕಚೇರಿ, ನ್ಯಾಯಾಂಗ ವ್ಯವಸ್ಥೆ, ವಿಶ್ವವಿದ್ಯಾಲಯಗಳನ್ನು ಕೇಂದ್ರ ಸರಕಾರ ಆಕ್ರಮಿಸಿಕೊಂಡಿದೆ. ಹೀಗಾಗಿ, ಅವುಗಳು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

'ಪೌರತ್ವ ಸಾಬೀತು ಪಡಿಸಲು ಸಾಧ್ಯವಾಗದ ವ್ಯಕ್ತಿಯನ್ನು ವಿದೇಶಿ ಎಂದು ಪರಿಗಣಿಸಿ ಬಂಧನ ಕೇಂದ್ರದಲ್ಲಿ ಇರಿಸಲಾಗುತ್ತದೆ. ಆ ವ್ಯಕ್ತಿಯ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಇದಕ್ಕಾಗಿ ಕೋಟ್ಯಂತರ ರೂ. ಖರ್ಚಾಗುತ್ತದೆ. ಎನ್‌ಆರ್‌ಸಿ ಜಾರಿಯಿಂದ ದೇಶದಲ್ಲಿ ಕೋಟ್ಯಂತರ ಮಂದಿಯನ್ನು ಬಂಧಿಸಬೇಕಾಗುತ್ತದೆ. ಇದರ ಬದಲು ಅಕ್ರಮ ವಲಸಿಗರ ಕುರಿತು ಸದ್ಯ ಇರುವ ಕಾನೂನನ್ನು ದೇಶದೆಲ್ಲೆಡೆ ಸೂಕ್ತವಾಗಿ ಜಾರಿಗೊಳಿಸಿದರೆ ಸಾಕಾಗುತ್ತದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
 
ಭಾರತವನ್ನು ಹಿಂದು ರಾಷ್ಟ್ರ ಮಾಡಬೇಕೆಂಬುದು ಆರೆಸ್ಸೆಸ್‌ನ ಕನಸಾಗಿದೆ. ಹೀಗಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಆ ಕನಸನ್ನು ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಜಾರಿಗೆ ತರುವ ಮೂಲಕ ನನಸು ಮಾಡಿಕೊಳ್ಳಲು ಮುಂದಾಗಿದೆ. ಎನ್‌ಆರ್‌ಸಿ ಕುರಿತು ಕೇಂದ್ರ ಸರಕಾರದ ಸಚಿವರು ಒಂದು ಹೇಳಿಕೆ ನೀಡಿದರೆ, ಪ್ರಧಾನಿಗಳು ಇನ್ನೊಂದು ರೀತಿ ಹೇಳಿಕೆ ನೀಡುತ್ತಾರೆ ಎಂದು ಅವರು ಹೇಳಿದರು.

SCROLL FOR NEXT