ರಾಜ್ಯ

ಬರಡು ನೆಲದಲ್ಲಿ ಹಸಿರು ಬೆಳೆಸಿದ 'ವೃಕ್ಷ ದೇವಿ' ತುಳಸಿ ಗೌಡ 

Sumana Upadhyaya

ಹೊನ್ನಾಳಿ(ಉತ್ತರ ಕನ್ನಡ): ಇವರು ಎಲ್ಲರಂತಲ್ಲ, ವಿಶಿಷ್ಟ ವ್ಯಕ್ತಿ ಮತ್ತು ವ್ಯಕ್ತಿತ್ವ. ಇವರ ದಿನನಿತ್ಯದ ಬದುಕು ಆರಂಭವಾಗುವುದೇ ಕೈಯಲ್ಲೊಂದು ಮಡಕೆ ಹಿಡಿದುಕೊಂಡು ಬರಿಗಾಲಿನಲ್ಲಿ ಮನೆಯಿಂದ ಹೊರಡುವ ಮೂಲಕ. ಅಲ್ಲಿಂದ ನೇರವಾಗಿ ನೀರು ಇರುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ಮಡಕೆಗೆ ಮಣ್ಣು, ನೀರು ಸೇರಿಸಿ ಗಿಡ ನೆಡುತ್ತಾರೆ.

ಇವರು ಬೇರೆ ಯಾರೂ ಅಲ್ಲ, ಎಪ್ಪತ್ತರ ವಯಸ್ಸಿನ ತೀವ್ರ ಪರಿಸರವಾದಿ ಅಜ್ಜಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹೊನ್ನಾಳಿ ಗ್ರಾಮದ ತುಳಸಿ ಗೌಡ. ಇವರ ಈ ಪರಿಸರ ಕಾಯಕಕ್ಕೆ ಕೇಂದ್ರ ಸರ್ಕಾರ ಈ ವರ್ಷ ಗಣರಾಜ್ಯೋತ್ಸವ ದಿನ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಅವರ ಜೀವನ, ಕಾಯಕವನ್ನು ಮೆಲುಕು ಹಾಕೋಣ ಬನ್ನಿ:


ತುಳಸಿ ಗೌಡ ಹಾಲಕ್ಕಿ ಸಮುದಾಯಕ್ಕೆ ಸೇರಿದವರು. ಸಾಲುಮರದ ತಿಮ್ಮಕ್ಕನಂತೆ ರಸ್ತೆ ಬದಿಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸುವ ಕಾರಣಕ್ಕೆ ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.
ತುಳಸಿ ಗೌಡ ಅವರಿಗೆ ಬಾಲ್ಯದಲ್ಲಿಯೇ ವಿವಾಹವಾಗಿತ್ತು. ಅವರು 17ನೇ ವಯಸ್ಸಿನಲ್ಲಿದ್ದಾಗಲೇ ಅವರ ಪತಿ ಗೋವಿಂದೆ ಗೌಡ ಮೃತಪಟ್ಟಿದ್ದರು. ಅದಕ್ಕೂ ಮೊದಲು ತಂದೆಯನ್ನು ಕಳೆದುಕೊಂಡಿದ್ದರು. ಆಗ ಜೀವನದಲ್ಲಿ ಏನು ಮಾಡುವುದೆಂದು ತೋಚದಾಯಿತು. ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.


ಹಾಲಕ್ಕಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ತುಳಸಿ ಗೌಡ ಅವರಿಗೆ ಪರಿಸರದ ಜೊತೆ ಒಡನಾಟ ಚೆನ್ನಾಗಿತ್ತು. ಮರ, ಗಿಡ, ಬಳ್ಳಿ, ಹೂವುಗಳ ಬಗ್ಗೆ ಪರಿಚಯವಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸ್ಥಳೀಯ ಜನರ ಗುಂಪೊಂದನ್ನು ದಿನಗೂಲಿ ನೌಕರರಾಗಿ ನೇಮಿಸಲು ತೀರ್ಮಾನಿಸಿತು. ತುಳಸಿ ಗೌಡಗೆ ಸಣ್ಣ ಸಣ್ಣ ಮಕ್ಕಳಿದ್ದ ಕಾರಣ ಅವರನ್ನು ಸಾಕಲು ಈ ಕೆಲಸಕ್ಕೆ ಸೇರಿದರು. ಅಲ್ಲಿಂದ ಪರಿಸರದ ಜೊತೆಗಿನ ಕೆಲಸ ಹೆಚ್ಚಾಯಿತು ಎಂದು ಮಾಜಿ ಶಾಸಕ ಸತೀಶ್ ಸೈಲ್ ಇವರ ಬಗ್ಗೆ ಹೇಳುತ್ತಾರೆ.


ಅಂದು ತುಳಸಿ ಗೌಡಗೆ ಸಿಗುತ್ತಿದ್ದುದು 1 ರೂಪಾಯಿ 25 ಪೈಸೆ ದಿನಗೂಲಿ. ಅದು ಕುಟುಂಬ ಪೋಷಣೆಗೆ ಸಾಕಾಗುತ್ತಿರಲಿಲ್ಲ. ಅಷ್ಟು ಕಡಿಮೆ ಸಂಬಳಕ್ಕೆ ದುಡಿಯಬೇಡ ಎಂದು ಬಂಧುಗಳು, ಸ್ನೇಹಿತರು ಅವರಿಗೆ ಹೇಳಿದರು. ಆದರೆ ಗಿಡ ನೆಡುವುದು, ಮರ ಬೆಳೆಸುವುದು ಅವರಿಗೆ ಹಿಂದಿನಿಂದಲೂ ಇಷ್ಟವಿದ್ದ ಕಾರಣ ಅವರು ಕೆಲಸ ಬಿಡಲಿಲ್ಲ. ಕಾಡೆಲ್ಲಾ ಸುತ್ತಿ ಅಪರೂಪದ ಬೀಜ, ಗಿಡಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಅದನ್ನು ಬಿತ್ತಲು ಆರಂಭಿಸಿದರು. ಗಿಡವಾಯಿತು. ನೋಡುನೋಡುತ್ತಿದ್ದಂತೆ ಇದು ಹೆಚ್ಚಾಗುತ್ತಾ ಹೋಗಿ ಹೊನ್ನಾಳಿ, ಮಸ್ತಿಗಟ್ಟ, ಹೆಗ್ಗೂರು, ಹೊಲಿಗೆ, ವಜ್ರಹಳ್ಳಿ, ದೊಂಗ್ರಿ, ಕಲ್ಲೇಶ್ವರ, ಅಡಗೂರು, ಅಗಸೂರು, ಸಿರಗುಂಜಿ, ಎಲೊಗಡ್ಡೆಗಳಲ್ಲಿ ಖಾಲಿ ಭೂಮಿಯಲ್ಲಿ ಅರಣ್ಯ ಇಲಾಖೆ ಇವರ ಗಿಡಗಳನ್ನು ನೆಡಿಸಿತು. ಇಂದು ಇವೆಲ್ಲಾ ಸೇರಿ 30 ಸಾವಿರಕ್ಕೂ ಅಧಿಕ ಮರಗಳಾಗಿವೆ.


ನಾವು ತೇಗ, ಎಳ್ಳು, ನಂದಿ, ಪೀಪುಲ್, ಫಿಕಸ್, ಬಿದಿರು, ರಾಟನ್, ಜಮುನ್, ಗೋಡಂಬಿ, ಜಾಯಿಕಾಯಿ, ಮಾವು, ಹಲಸು, ಕೊಕುಮ್‌ನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ  ಎಂದು ತುಳಸಿ ಗೌಡ ಹೇಳುತ್ತಾರೆ. ಇವರ ಕೆಲಸದ ಬಗ್ಗೆ ಪುತ್ರ ಸುಬ್ಬರಾಯ ಗೌಡ ಹೆಮ್ಮೆಯಿಂದ ಮಾತನಾಡುತ್ತಾರೆ. ಗ್ರಾಮಸ್ಥರಿಗೆ, ಸುತ್ತಮುತ್ತಲಿನ ಜನರಿಗೆ ತುಳಸಜ್ಜಿ ಎಂದೇ ಜನಪ್ರಿಯ. ಇಂದಿನ ಯುವಜನಾಂಗದವರು ಅವರ ಬಳಿ ಹೋಗಿ ಗಿಡ, ಬಳ್ಳಿ, ಬೀಜಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ, ಹೇಗೆ ನೆಟ್ಟು ಬೆಳೆಸಬೇಕೆಂದು ಸಲಹೆ ಪಡೆಯುತ್ತಾರೆ. ಜನರು ಪ್ರೀತಿಯಿಂದ 'ವೃಕ್ಷ ದೇವಿ' ಎಂದು ಕರೆಯುತ್ತಾರೆ.


ತುಳಸಿ ಗೌಡಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳು ಸಿಕ್ಕಿವೆ. 35 ವರ್ಷಗಳ ಕಾಲ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಾರೆ.
ತುಳಸಿ ಗೌಡ ಅವರಿಗೆ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಬಂದಿತ್ತು. ಅವರಿಗೇ ಆ ಪ್ರಶಸ್ತಿ ನೀಡಬೇಕು ಎಂದು ಹಿರಿಯ ಪರಿಸರವಾದಿ ಎ ಎನ್ ಯಲ್ಲಪ್ಪ ರೆಡ್ಡಿ ಒತ್ತಾಯಿಸಿದ್ದರಿಂದ ತುಳಸಿ ಗೌಡಗೆ 1986-87ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದರು.

ಆದರೆ ಸ್ಥಳೀಯ ಅರಣ್ಯಾಧಿಕಾರಿಗಳು ಪ್ರಶಸ್ತಿ ಮತ್ತು ನಗದು ಮೊತ್ತವನ್ನು ಅವರಿಂದ ಕಸಿದುಕೊಂಡಿತು ಎಂಬ ಆರೋಪಗಳಿದೆ. ಏಕೆಂದರೆ 50 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹಸಿರು ಬೆಳೆಸಿದವರಲ್ಲಿ ಯಲ್ಲಪ್ಪ ರೆಡ್ಡಿಯವರಂತೆ ತುಳಸಿ ಗೌಡ ಪಾತ್ರವೂ ಇದೆ.

SCROLL FOR NEXT