ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ನಾಟಕವೆಂದು ಹೇಳಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ನಾಗರೀಕ ಸಮಾಜದ ಸದಸ್ಯರು ತೀವ್ರವಾಗಿ ಕಿಡಿಕಾರಿದ್ದಾರೆ.
ಅನಂತ್ ಕುಮಾರ್ ಹೆಗಡೆ ಹೇಳಿಕೆ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್'ಗೆ ಪತ್ರ ಬರೆದಿರುವ ಕಾಂಗ್ರೆಸ್, ಅನಂತ್ ಕುಮಾರ್ ಅವರು ಸಂಸದರಾಗಿ ಅನರ್ಹರು ಎಂದು ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಹೆಗಡೆಯವರು ಈ ಹಿಂದೆ ಕೂಡ ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಸದರಾಗಿ ಅವರು ಅನರ್ಹರು ಎಂದು ಕಾಂಗ್ರೆಸ್ ನಾಯಕ ಹಾಗೂ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಅವರು ಹೇಳಿದ್ದಾರೆ.
ಭಾರತ ಸಂವಿಧಾನದ ಪ್ರಮಾಣವಚನ ಸ್ವೀಕರಿಸಿದ ಸಂಸತ್ತಿನ ಸದಸ್ಯರೊಬ್ಬರು ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಹೆಗಡೆ ಸಂಸತ್ತಿನ ಸದಸ್ಯರಾಗಿದ್ದು, ಅವರು ನೀಡಿರುವ ಹೇಳಿಕೆ ಕೇವಲ ಸಂವಿಧಾನಕ್ಕಷ್ಟೇ ಅಲ್ಲದೆ, ಸಂಸತ್ತಿಗೂ ಅವಮಾನ ಮಾಡಿದಂತೆ. ಸರಿಯಾದ ಬೋಧಕವರ್ಗ ಹೊಂದಿರುವ ಯಾವುದೇ ಬಲ ಚಿಂತನೆಯ ಪ್ರಜೆಯು ಭಾರತದ ಅಡಿಪಾಯ ಮತ್ತು ಅದರ ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾದ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡಿರುವುದು ನಿಜಕ್ಕೂ ದುರಾದೃಷ್ಟಕರ. ನಮ್ಮ ಸ್ವಾತಂತ್ರ್ಯ ಹೋರಾಟದ ಶ್ರಮದ ಬಗ್ಗೆ ಅವರಿಗೆ ತಿಳಿದಿಲ್ಲ. ಗಾಂಧೀಜಿ ಬಗ್ಗೆ ಹೆಗಡೆ ಇಂತಹ ಹೇಳಿಕೆ ನೀಡಲು ಹೇಗೆ ಸಾಧ್ಯ? ಲೋಕಸಭಾ ಸಂಸದ ಸ್ಥಾನದಿಂದ ತೆಗೆದು ಹಾಕುವುದಷ್ಟೇ ಅಲ್ಲ. ಇಂತಹ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿ ಭವನದ ಉಪಾಧ್ಯಕ್ಷ ಎನ್.ತಿಪ್ಪಣ್ಣ ಗೌಡ ಹೇಳಿದ್ದಾರೆ.