ರಾಜ್ಯ

4ನೇ ಶನಿವಾರ ರಜೆ ಅನ್ವಯವಾಗದ ಸರ್ಕಾರಿ ನೌಕರರಿಗೆ 15 ದಿನ ಸಾಂದರ್ಭಿಕ ರಜೆ: ಸಂಪುಟ ಅಸ್ತು

Lingaraj Badiger

ಬೆಂಗಳೂರು: ತಿಂಗಳ ನಾಲ್ಕನೇ ಶನಿವಾರ ರಜೆ ಅನ್ವಯವಾಗದ ಸರ್ಕಾರಿ ನೌಕರರಿಗೆ ಹತ್ತು ದಿನದ ಬದಲು 15 ದಿನಗಳ ಸಾಂದರ್ಬಿಕ ರಜೆ (ಸಿಎಲ್) ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಶಿಕ್ಷಕರು ಒಳಗೊಂಡಂತೆ ಕೆಲವು ಸರ್ಕಾರಿ ನೌಕರರಿಗೆ ಕಡಿತಗೊಳಿಸಿದ್ದ ಸಾಂದರ್ಬಿಕ ರಜೆಯನ್ನು 10 ರಿಂದ 15 ದಿನಗಳಿಗೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧು ಸ್ವಾಮಿ ಮಾಹಿತಿ ನೀಡಿದರು. 

ಸವದತ್ತಿಯಲ್ಲಿನ ಕಳಸಾ-ಬಂಡೂರಿ ವಿಚಾರದಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣ ವಾಪಸ್, ಮಂಡ್ಯದ ಮಾದೇಗೌಡರ ಹೋರಾಟ ಹಾಗೂ ರೈತರ ಮೇಲಿನ 35 ಪ್ರಕರಣಗಳು ಸೇರಿದಂತೆ ಒಟ್ಟು 51 ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಕಳೆದ 2015ರಲ್ಲಿ ಗೋಕರ್ಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಿರುದ್ಧ ಅಶ್ಲೀಲ ಸಿಡಿ ಬಿಡುಗಡೆ ಮಾಡಿ ಅವರ ಘನತೆಗೆ ದಕ್ಕೆ ತಂದವರ ವಿರುದ್ಧದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸ್ವಾಮೀಜಿ ವಿರುದ್ಧ ಅಶ್ಲೀಲ ಸಿಡಿ ಬಿಡುಗಡೆ ಮಾಡಿ ಸ್ವಾಮೀಜಿ ಅವರ ಘನತೆಗೆ ಧಕ್ಕೆ ತಂದವರ ಮೇಲೆ ಕಳೆದ 2015ರಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಈ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ತಲುಪಿರಲಿಲ್ಲ. ಹಿಂದಿನ ಸರ್ಕಾರ ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ವಾಪಸ್ ಪಡೆಯಲು ಮುಂದಾಗಿತ್ತು. ಆದರೆ ಹಾಲಿ ಸರ್ಕಾರ ಪ್ರಕರಣದ ತನಿಖೆ ಮುಂದುವರಿಸಲು ನಿರ್ಧರಿಸಿದೆ. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಬೆಂಗಳೂರಿನ ನಿರ್ವಾಚನಾ ನಿಲಯದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 13.50 ಕೋಟಿ ರೂ. ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಶಿಕ್ಷಣ ಇಲಾಖೆಯ ನಲಿ-ಕಲಿ ಕಾರ್ಯಕ್ರಮದಲ್ಲಿ ಕಲಿಕಾ ಸಾಮಗ್ರಿ ಕೊಡಲು 27 ಕೋಟಿ ರೂ.ಬಿಡುಗಡೆ, ವಿವಿಧ ಜಿಲ್ಲೆಗಳಲ್ಲಿ 120 ಆಂಬುಲೆನ್ಸ್​ ಖರೀದಿಗೆ 32 ಕೋಟಿ ರೂ. ಬಿಡುಗಡೆ. ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ವಿದ್ಯಾಲಯ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 263 ಕೋಟಿ ರೂ.ಬಿಡುಗಡೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

SCROLL FOR NEXT