ರಾಜ್ಯ

ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಆಸ್ತಿ ಬೆಲೆ ಏರಿಕೆ ಸಾಧ್ಯತೆ?

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸದ್ಯದಲ್ಲಿಯೇ ಆಸ್ತಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷ ಶೇ. 8 ರಿಂದ 10 ರಷ್ಟು ಮಾರ್ಗಸೂಚಿ ಮೌಲ್ಯಗಳನ್ನು ಪರಿಷ್ಕರಿಸಲು  ಸ್ಟಾಂಪ್ಸ್ ಮತ್ತು ನೋಂದಣಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಪರಿಷ್ಕೃತ ಮಾರ್ಗಸೂಚಿ ಮೌಲ್ಯಗಳ ಕರಡನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ಇದು ಅನುಮೋದನೆಗೊಂಡ ಬಳಿಕ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇರುವುದಾಗಿ  ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಜಾರಿಗೆ ರಾಜ್ಯ ಸರ್ಕಾರಕ್ಕೆ ಹಣದ ಕೊರತೆ ಎದುರಾಗಿರುವುದರಿಂದ ಈ ಆಸ್ತಿ ಮೌಲ್ಯ ಹೆಚ್ಚಿಸುವ ಮೂಲ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. 2019-2020ರ ಅವಧಿಯಲ್ಲಿ 11 ಸಾವಿರದ 828 ಕೋಟಿ ಸಂಗ್ರಹಿಸಲು ಕಂದಾಯ ಇಲಾಖೆಗೆ ಟಾರ್ಗೆಟ್ ನೀಡಲಾಗಿತ್ತು. ಈವರೆಗೂ ಸ್ಟಾಂಪ್ಸ್, ನೋಂದಣಿ ಮತ್ತು ತೆರಿಗೆಗಳಿಂದ 10 ಸಾವಿರದ 100 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ.

ಗರಿಷ್ಠ ಅಭಿವೃದ್ಧಿ ಕಂಡಿರುವ ಹಾಗೂ ಆಸ್ತಿಗಳಿಗೆ ಹೆಚ್ಚಿನ ಬೆಲೆ ಇರುವ ಉತ್ತರ ಮತ್ತು ಪೂರ್ವ ಬೆಂಗಳೂರು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಮೌಲ್ಯ ಏರಿಕೆ ಆಗಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

SCROLL FOR NEXT