ರಾಜ್ಯ

ವಿಜ್ಞಾನದಿಂದ ಸಬಲೀಕರಣ ಸಾಧ್ಯ: ಪ್ರೊ: ಸಿ.ಎನ್.ಅರ್.ರಾವ್

Lingaraj Badiger

ಬೆಂಗಳೂರು: ವಿಜ್ಞಾನ ಅಧ್ಯಯನ ಮತ್ತು ವಿಜ್ಞಾನ ಕ್ಷೇತ್ರದ ಸಬಲೀಕರಣದಿಂದ ಮಾತ್ರ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್ ಅವರು ಪ್ರತಿಪಾದಿಸಿದ್ದಾರೆ.

ನಗರದ ಜಿ.ಕೆ.ವಿ.ಕೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದ ಭಾಗವಾಗಿ ಆಯೋಜಿಸಲಾದ ಮಕ್ಕಳ ವಿಜ್ಞಾನ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕೋಟ್ಯಂತರ ಮಕ್ಕಳು ಅಸಾಧಾರಣ ಆಲೋಚನಾ ಶಕ್ತಿ ಹೊಂದಿದ್ದಾರೆ. ಉತ್ತಮ ಅವಕಾಶಗಳು ದೊರೆತಲ್ಲಿ ಆ ಮಕ್ಕಳು ಸಹ ಶ್ರೇಷ್ಠ ವಿಜ್ಞಾನಿಗಳಾಗಬಲ್ಲರು. ವಿಜ್ಞಾನ ಅಧ್ಯಯನ ಹೆಮ್ಮೆಯ ವಿಷಯವಾಗಬೇಕು ಎಂದರು.

ಯಾವುದೇ ವಿಷಯದ ಬಗ್ಗೆ ಕುತೂಹಲ, ಅಪರಿಮಿತ ಉತ್ಸಾಹ ಮತ್ತು ಅದನ್ನು ಅರಿಯಬೇಕು ಎನ್ನುವ ಬದ್ಧತೆ ಉತ್ತಮ ವಿಜ್ಞಾನಿಗಳಾಗಲು ಅಗತ್ಯವಿರುವ ಮೂಲ ಗುಣಗಳಾಗಿವೆ. ನಿರಂತರ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಇಲ್ಲಿ ಸಾಧನೆ ಮಾಡಲು ಯಾವುದೇ ಮಿತಿ ಇಲ್ಲ ಎಂದರು.

ದಣಿವರಿಯದ ಮನಸ್ಸು ಮತ್ತು ಕ್ರಿಯಾಶೀಲತೆ, ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಮೂಲ ಮಂತ್ರವಾಗಿದೆ. ಯಾವುದೇ ಪದವಿ ಮತ್ತು ಹಣಕ್ಕಿಂತ ಅಧ್ಯಯನ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ. ರಷ್ಯಾದ ರಸಾಯನ ಶಾಸ್ತ್ರ ತಜ್ಞ ಡಿಮಿಟ್ರಿ ಮೆಡ್ವಡೇವ್ ಅತ್ಯಂತ ಬಡಕುಟುಂಬದ ಹುಡುಗನಾಗಿದ್ದ, ಆದರೂ, ೧೮೬೯ರಲ್ಲಿ ಮೊಟ್ಟಮೊದಲ ಆವರ್ತಕ ಕೋಷ್ಠಕವನ್ನು ಕಂಡು ಹಿಡಿಯುವಷ್ಟು ಬುದ್ಧಿವಂತನಾಗಿದ್ದ ಎಂದು ಸ್ಮರಿಸಿದರು.

ದೇಶದ ಹೆಮ್ಮೆಯ ವಿಜ್ಞಾನಿ ಹಾಗೂ ರಾಮನ್ ಪರಿಣಾಮಗಳಿಗೆ ವಿಶ್ವವಿಖ್ಯಾತರಾಗಿರುವ ಸಿ.ವಿ.ರಾಮನ್, ತಮ್ಮ ೧೬ನೆಯ ಎಳೆವಯಸ್ಸಿನಲ್ಲಿಯೇ ೨ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದರು ಎಂದು ಸಿ.ಎನ್.ಆರ್.ರಾವ್, ಮಕ್ಕಳಿಗೆ ಉದಾಹರಣೆಗಳನ್ನು ನೀಡಿದರು. ಜೆ.ಸಿ.ಬೋಸ್, ಭಾರತದ ಮತ್ತೊಬ್ಬ ಖ್ಯಾತ ವಿಜ್ಞಾನಿ, ಮಾರ್ಕೋನಿಗಿಂತ ಮೊದಲೇ ಟೆಲಿಗ್ರಾಮ್‌ಅನ್ನು ಕಂಡು ಹಿಡಿದಿದ್ದರು ಎಂದು ವಿವರಿಸಿದರು. 

SCROLL FOR NEXT