ರಾಜ್ಯ

ರಣಾಂಗಣವಾದ ಬಾಗಲಕೋಟೆ ಜಿ.ಪಂ. ಸಾಮಾನ್ಯ ಸಭೆ: ಅಸಂಸದೀಯ ಪದಗಳ ಬಳಕೆ! 

Srinivas Rao BV

ಬಾಗಲಕೋಟೆ: ನಾನಾ ಕಾರಣಗಳಿಂದಾಗಿ ಮರ‍್ನಾಲ್ಕು ಬಾರಿ ಮುಂದೂಡಲ್ಪಟ್ಟಿದ್ದ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಇಂದು ನಡೆಯಿತಾದರೂ ಅಕ್ಷರಶಃ ರಣಾಂಗವಾಗಿತ್ತು.

ಯಾರದೋ ಪ್ರಶ್ನೆಗೆ ಇನ್ನಾರೋ ಉತ್ತರ ಕೊಡುವುದು, ಸಂಬಂಧಿಸಿದವರು ಮೌನಕ್ಕೆ ಶರಣಾಗುವುದು, ಮಾತಿಗೆ ಮಾತು ಬೆಳೆಸುವುದು, ಅಧ್ಯಕ್ಷರ ವೇದಿಕೆ ಬಳಿ ಹೋಗಿ ಧರಣಿ ಕೂಡ್ರುವುದು, ಸದಸ್ಯರ ಯಾವ ಪ್ರಶ್ನೆಗಳಿಗೂ ಸೂಕ್ತ ಉತ್ತರ ಸಿಗದೆ ಇರುವುದು, ಸಂಬಂಧ ಇಲ್ಲದವರು ಸದಸ್ಯರ ನಡುವೆ ಸಮನ್ವಯ ಸಾಧಿಸಲು ಮುಂದಾಗುವುದು ಇದೇ ಇಂದಿನ ಸಭೆಯಲ್ಲಿ ನಡೆಯಿತೆ ಹೊರತು ಸಂತ್ರಸ್ತರ ಸಮಸ್ಯೆ, ಜಿಲ್ಲೆಯಲ್ಲಿನ ಕುಡಿವ ನೀರಿನ ಸಮಸ್ಯೆ ಸೇರಿದಂತೆ ಇತರ ಯಾವ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಚರ್ಚೆ ನಡೆಯಲೇ ಇಲ್ಲ.

ಜಿ.ಪಂ. ಅಧ್ಯಕ್ಷರಾದಿಯಾಗಿ ಬಹುತೇಕ ಸದಸ್ಯರು ವಾಗ್ವಾದದಲ್ಲಿ ಯಥೇಚ್ಛವಾಗಿ ಅಸಂಸದೀಯ ಪದ ಬಳಕೆ ಮಾಡುವುದು ಸಾಮಾನ್ಯವಾಗಿತ್ತು. ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಸಭೆ ಆರಂಭಗೊಂಡದ್ದೇ 1.15 ನಿಮಿಷದ ಹೊತ್ತಿಗೆ. ಸಭೆ ಆರಂಭ ಬಳಿಕವಾದರೂ ಕ್ರೀಯಾ ಯೋಜನೆ ಅನುಷ್ಠಾನ, ಅಭಿವೃದ್ಧಿ ಕಾರ್ಯಗಳ ಚರ್ಚೆ, ನೆರೆ ಸಂತ್ರಸ್ತರ ವಿಚಾರಕ್ಕೆ ಅವಕಾಶವೇ ಸಿಗಲಿಲ್ಲ.  ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಜಿ.ಪಂ. ಹಿರಿಯ ಸದಸ್ಯ ಹೂವಪ್ಪ ರಾಠೋಡ ಅವರು ಜಿ.ಪಂ. ಅಧ್ಯಕ್ಷ ಮತ್ತು ಸಿಇಒ ಅವರನ್ನು ತರಾಟಗೆ ತೆಗೆದುಕೊಂಡು ಎಷ್ಟು ಹೊತ್ತಿಗೆ ಸಭೆ ಕರೆದಿದ್ದೀರಿ, ಮರ‍್ನಾಲ್ಕು ಬಾರಿ ಸಭೆಗಳನ್ನು ಮುಂದೂಡಿ ಇದೀಗ ಇಂದು 11 ಗಂಟೆಗೆ ಸಭೆ ಕರೆದಿದ್ದೀರಿ. ಈಗ 1.15 ನಿಮಿಷವಾದರೂ ಇನ್ನೂ ಸಭೆ ಆರಂಭಗೊಂಡಿಲ್ಲ. ಕಾನೂನು ಪಾಲನೆ ಮಾಡಿ ಎಂದು ಕುಟುಕಿದರು.

ಮತ್ತೊಬ್ಬ ಸದಸ್ಯರಾದ ಶಿವಾನಂದ ಪಾಟೀಲ ಮಧ್ಯೆ ಪ್ರವೇಶಿಸಿ ಸಭೆ ಆರಂಭಕ್ಕೆ ನಾಡಿನಲ್ಲಿ ನಿಧನಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಬೇಕಾದುದು ಸಂಪ್ರದಾಯ, ಆದರೆ ಇಲ್ಲಿ ಇತ್ತೀಚೆಗೆ ನಿಧರಾನದ ಪೇಜಾವರ ಶ್ರೀ ಮತ್ತು ಚಿದಾನಂದಮೂರ್ತಿ ಅವರ ನಿಧನಕ್ಕೆ ಏಕೆ ಸಂತಾಪ ಸೂಚಿಸಲಿಲ್ಲ ಎಂದು ತರಾಟಗೆ ತೆಗೆದುಕೊಂಡರು. 

ಸದಸ್ಯರ ಮಾತಿನ ಮಧ್ಯೆಯೇ ಶಶಿಕಾಂತ ಪಾಟೀಲ ಅವರು ಬಹುಹಳ್ಳಿ ಕುಡಿವ ನೀರಿನ ಯೋಜನೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ಏಕೆ ವರದಿ ಕೊಡುತ್ತಿಲ್ಲ. ಅವ್ಯವಹಾರದ ತನಿಖೆ ನಡೆಯುತ್ತಿರುವಾಗಲೇ ಕಾಮಗಾರಿಗೆ ಏಕೆ ಚಾಲನೆ ನೀಡಿದಿರಿ, ನಾವೇನೂ ದನ ಕಾಯುವವರಾ? ಯಾರದೋ ಮನೆ ಕಾಯ್ದು ನಾವು ಜಿಪಂಗೆ ಬಂದಿಲ್ಲ ಎನ್ನುತ್ತಲೇ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಡುವೆ ಪರಸ್ಪರ ವಾಗ್ದಾಳಿ ಶುರುವಾಯಿತು. ಸಭೆ ರಣಾಂಗಣವಾಗಿ ಮಾರ್ಪಟ್ಟಿತು. ಅವ್ಯವಹಾರ ತನಿಖೆ ನಡೆಸಲು ನೇಮಕ ಮಾಡಿದ್ದ ಸಮಿತಿ ವರದಿ ಕೊಡಿ ಇಲ್ಲವೇ ರಾಜೀನಾಮೆ ಕೊಡುವೆ ಎಂದು ಶಶಿಕಾಂತ ಪಾಟೀಲ ಪಟ್ಟು ಹಿಡಿದರು. ಇಷ್ಟೆಲ್ಲ ಆಗುತ್ತಿದ್ದರೂ ಸಿಇಒ ಮಾತ್ರ ಮೌನಕ್ಕೆ ಶರಣಾಗಿದ್ದರು. ಇದರಿಂದ ಕುಪಿತರಾದ ಸದಸ್ಯರೆಲ್ಲ ವರದಿ ಕೊಡಿ ಎಂದು ವೇದಿಕೆ ಮುಂದೆ ಧರಣಿ ಆರಂಭಿಸಿದಾಗ ಈಗಲೇ ಕೊಡಲಾಗದು, ಶನಿವಾರ ವರದಿ ಪ್ರತಿ ಕೊಡುವೆ ಎಂದರು. 

ವೀಣಾ ನಡೆ ನಿಗೂಢ:
ಬಹುಹಳ್ಳಿ ಕುಡಿವ ನೀರಿನ ಯೋಜನೆ ತನಿಖಾ ವರದಿ ಕುರಿತು ಅಧ್ಯಕ್ಷೆ ಬಾಯಕ್ಕ ಮೇಟಿ, ಶಶಿಕಾಂತ ಪಾಟೀಲ, ಉಪಾಧ್ಯಕ್ಷ  ಮುತ್ತಪ್ಪ ಕೋಮಾರ, ಹೂವಪ್ಪ ರಾಠೋಡ, ಶಿವಾನಂದ ಪಾಟೀಲ, ಮಹಾಂತೇಶ ಉದಪುಡಿ, ಪಾಲಭಾವಿ ಅವರ ನಡುವೆ ಪರಸ್ಪರ ಮಾತಿನ ಚಕಮಕಿ ತಾರಕ್ಕೇರಿದ್ದ ವೇಳೆ ಜಿಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಧ್ಯೆ ಪ್ರವೇಶಿಸಿ ಸಂಧಾನಕ್ಕೆ ಏಕೆ ಮುಂದಾದರು ಎನ್ನುವುದು ನಿಗೂಢವಾಗಿಯೇ ಉಳಿಯಿತು.

ವಿಠ್ಠಲ ಆರ್. ಬಲಕುಂದಿ

SCROLL FOR NEXT