ರಾಜ್ಯ

ನಂದಿನಿ ಹಾಲು 1-3 ರೂ. ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

Srinivasamurthy VN

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ದರದಲ್ಲಿ 1 ರಿಂದ 2 ರೂ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತಂತೆ ಕರ್ನಾಟಕ ಹಾಲು ಮಹಾ ಮಂಡಲಿ(ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾಹಿತಿ ನೀಡಿದ್ದು, ನಂದಿನಿ ಹಾಲಿನ ಬೆಲೆಯನ್ನು ಶೀಘ್ರದಲ್ಲಿಯೇ 1ರಿಂದ 3 ರೂಪಾಯಿವರೆಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದ್ದು, ಹೆಚ್ಚಿಸಿದ ಮೊತ್ತವನ್ನು ರೈತರಿಗೇ ತಲುಪಿಸಲಾಗುವುದು. ರೈತರಿಗೆ ಸಹಾಯಧನ ಸೇರಿದಂತೆ ಹಾಲು ಒಕ್ಕೂಟದಿಂದ ನೀಡಲಾಗುವ ಸೌಲಭ್ಯಗಳನ್ನು ಶಾಶ್ವತವಾಗಿರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದರ ಏರಿಕೆ ಕುರಿತು ಕೆಎಂಎಫ್ ಡೈರಿ ಸರ್ಕಲ್ ನಲ್ಲಿರುವ ಕೆಎಂಎಫ್ ಕಚೇರಿಯಲ್ಲಿ ಹಾಲು ಮಹಾಮಂಡಲದ ನಿರ್ದೇಶಕರ ಸಭೆ ನಡೆಯಿತು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಲಿನ ದರ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಒಪ್ಪಿಗೆ ಸೂಚಿಸಿದ್ದಾರೆ. ದರ ಹೆಚ್ಚಳದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ಅಧ್ಯಕ್ಷರಿಗೆ ನಿರ್ಣಯ ಮಾಡಲು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆದ ಹಾಲು ಶೀಥಲ ಕೇಂದ್ರ ಮತ್ತು ಶಿಬಿರ ಕಚೇರಿಯ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

'ಖಾಸಗಿ ಡೈರಿ ಹಾಲಿನ ದರಕ್ಕೆ ಹೊಲಿಕೆ ಮಾಡಿದರೆ ನಂದಿನಿ ದರ ಕಡಿಮೆ ಇದೆ. ಮೂರು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಈಗಾಗಿ ಎಲ್ಲಾ ಒಕ್ಕೂಟದವರು ಹಾಲಿನ ದರ ಏರಿಕೆ ಮಾಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಇನ್ನೆರೆಡು ದಿನಗಳಲ್ಲಿ ಅಂತಿಮ ಚರ್ಚೆ ಮಾಡಿದ ಬಳಿಕ ನಿಖರ ದರ ಹೆಚ್ಚಳದ ಬಗ್ಗೆ ತಿಳಿಸುವುದಾಗಿ' ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

SCROLL FOR NEXT