ಗಂಗಾವತಿ: ತಾಲೂಕಿನ ಮರಳಿ ಟೋಲ್ಗೇಟ್ಗೆ ಟಿಕೆಟ್ ತೆಗಸುವ ವಿಚಾರಕ್ಕೆ ಮಂಗಳಮುಖಿಯರು ಹಾಗೂ ಕಂಡಕ್ಟರ್ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.
ಗಲಾಟೆಯಲ್ಲಿ ಶಿವಮೊಗ್ಗ ಡಿಪೋದ ಕಂಡಕ್ಟರ್ ದಾದೇಸಾಬ್ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿವಮೊಗ್ಗದಿಂದ ರಾಯಚೂರಿಗೆ ಹೊರಟಿದ್ದ ಬಸ್ನಲ್ಲಿ ಜುಲಾಯಿ ನಗರದಲ್ಲಿ ಮಂಗಳಮುಖಿಯರು ಹತ್ತಿದ್ದಾರೆ. ಅಲ್ಲಿಂದ ಮರಳಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ.
ಮರಳಿಗೆ ಬಸ್ಸ್ಟಾಪ್ ಇಲ್ಲ. ಸಿದ್ದಾಪುರ ಟಿಕೆಟ್ ಕೊಡ್ತೀನಿ ಅಂತ ಕಂಡಕ್ಟರ್ ದಾದೇಸಾಬ್ ಹೇಳಿದ್ದಾರೆ. ಇದರಿಂದ ನಮಗೆ ಮರಳಿ ಟೋಲ್ ಗೇಟ್ಗೆ ಟಿಕೆಟ್ ಕೊಡಲೇಬೇಕು ಎಂದು ಮಂಗಳಮುಖಿಯರು ಪಟ್ಟು ಹಿಡಿದಿದ್ದಾರೆ. ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಕಂಡಕ್ಟರ್ ಮುಖಕ್ಕೆ ರಕ್ತ ಬರುವ ಹಾಗೆ ಮಂಗಳಮುಖಿಯರು ಥಳಿಸಿದ್ದಾರೆ ಎನ್ನಲಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.