ರಾಜ್ಯ

ಆಂಬ್ಯುಲೆನ್ಸ್ ಗೆ ಕಾದು ರಸ್ತೆಯಲ್ಲೇ ಪ್ರಾಣಬಿಟ್ಟ ಕೋವಿಡ್-19 ರೋಗಿ:ಕುಟುಂಬಸ್ಥರಲ್ಲಿ ಬಿಬಿಎಂಪಿ ಆಯುಕ್ತ ಕ್ಷಮೆಯಾಚನೆ

Sumana Upadhyaya

ನವದೆಹಲಿ: ಗಂಟೆಗಟ್ಟಲೆ ಆಂಬ್ಯುಲೆನ್ಸ್ ಗೆ ಕಾದು ಮನೆ ಮುಂದೆ ರಸ್ತೆಯಲ್ಲಿ ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕ್ಷಮೆ ಕೇಳಿದ್ದಾರೆ.

ಘಟನೆ ಬಳಿಕ ಕುಟುಂಬಸ್ಥರನ್ನು ಭೇಟಿ ಮಾಡಿದ ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್, ಪಾಲಿಕೆ ಪರವಾಗಿ ಕ್ಷಮೆಯಾಚಿಸಿದ್ದಾರೆ.

ಅವರು ಮಾಡಿರುವ ಟ್ವೀಟ್ ನಲ್ಲಿ ಕುಟುಂಬ ಸದಸ್ಯರ ಬಳಿ ಕ್ಷಮೆಯಾಚುತ್ತಿರುವ ದೃಶ್ಯ ಕಂಡುಬರುತ್ತಿದೆ. ಕೊರೋನಾ ರೋಗಿಗಳನ್ನು ಮತ್ತು ಅವರ ಮನೆಯವರನ್ನು ಕಳಂಕಿತರಂತೆ ಕಾಣಬೇಡಿ ಎಂದು ಸಹ ಟ್ವೀಟ್ ಮಾಡಿದ್ದಾರೆ.

ಮೃತ ವ್ಯಕ್ತಿಯ ಪತ್ನಿ ಹೇಳಿದ್ದೇನು?: ಉಸಿರಾಟದ ಸಮಸ್ಯೆಗೆ ಪತಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣವಾಗಲಿಲ್ಲ, ಮೊನ್ನೆ ಶುಕ್ರವಾರ ಕೋವಿಡ್-19 ಪರೀಕ್ಷೆ ಮಾಡಿಸಿ ವರದಿಯಲ್ಲಿ ಪಾಸಿಟಿವ್ ಎಂದು ಬಂದ ನಂತರ ಆಸ್ಪತ್ರೆಗೆ ಹೋಗಲು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದೆವು.

ಆಂಬ್ಯುಲೆನ್ಸ್ ಬರುವುದು ತಡವಾದಾಗ ಮನೆಯಿಂದ ಹೊರಬಂದು ಆಟೋದಲ್ಲಿ ಹೋಗಲು ನಿರ್ಧರಿಸಿದೆವು, ಆದರೆ ಮನೆಯಿಂದ ಹೊರಬಂದ ಕೂಡಲೇ ಪತಿ ಕುಸಿದು ಬಿದ್ದು ಮೃತಪಟ್ಟರು, ಮಳೆ ಬರುತ್ತಿತ್ತು, ಶವವನ್ನು ಹೊರತೆಗೆಯಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದೆವು. ಕೊನೆಗೆ ಆಂಬ್ಯುಲೆನ್ಸ್ ಬಂದು ಶವವನ್ನು ತೆಗೆದುಕೊಂಡು ಹೋಯಿತು ಎಂದು ವಿವರಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನ ಹನುಮಂತನಗರ ಸಮೀಪ ಗವಿಪುರಂ ಬಳಿ ಈ ದುರ್ಘಟನೆ ನಡೆದಿತ್ತು. ಈ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಸುದ್ದಿಯಾಯಿತು.

SCROLL FOR NEXT