ರಾಜ್ಯ

'ಸಾರಿ'ಯಿಂದ ಬಳಲುತ್ತಿರುವವರಿಗೂ ಆಸ್ಪತ್ರೆ, ಹಾಸಿಗೆಗಳ ಅಗತ್ಯವಿದೆ: ವೈದ್ಯರು

Manjula VN

ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಕೇವಲ ಕೊರೋನಾ ಸೋಂಕಿತರಷ್ಟೇ ಸಂಕಷ್ಟಕ್ಕೆ ಸಿಲುಕಿಲ್ಲ. 'ಸಾರಿ' (ವಿಷಮ ಶೀತಜ್ವರ, ಉಸಿರಾಟ ಸಮಸ್ಯೆ)ಯಿಂದ ಬಳಲುತ್ತಿರುವ ಜನರೂ ಕೂಡ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. 

ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಜನರು ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಕೆಲವರು ವೈದ್ಯಕೀಯ ವರದಿಗಳಿಗಾಗಿ ಕಾದು ಕುಳಿತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗದೆ ಸಂಕಷ್ಟದಲ್ಲಿದ್ದಾರೆಂದು ತಿಳಿದುಬಂದಿದೆ. 

ಕಳೆದೆರಡು ದಿನಗಳಿಂದ ಹಲವು ರೋಗಿಗಳು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಹಾಸಿಗೆಗಾಗಿ 12ಕ್ಕೂ ಆಸ್ಪತ್ರೆಗಳಿಗೆ ಸುತ್ತಾಡುತ್ತಿದ್ದಾರೆ. ಕೆಲವರು ಕೊರೋನಾ ಪರೀಕಷೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಯಂತೆ ಆಸ್ಪತ್ರೆಗಳಿಗೆ ತಿರುಗಾಡುತ್ತಲೇ ಇದ್ದಾರೆ. ಕೆಲವರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಆ್ಯಂಬುಲೆನ್ಸ್ ನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಬಳಿಕ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ದೃಢಪಡುತ್ತಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

ಕೊರೋನಾ ವೈದ್ಯಕೀಯ ವರದಿಗಾಗಿ ಕಾಯುತ್ತಿರುವ ಸಾರಿ ಪ್ರಕರಣಗಳ ಜನರಿಗೆ ಐಸೋಲೇಷನ್ ಬೆಡ್ ಗಳನ್ನು ಮೀಸಲಿಡಬೇಕು. ಆದರೆ, ಪರೀಕ್ಷೆಗೊಳಪಡದ ಜನರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಆಸ್ಪತ್ರೆಗಳೂ ಕೂಡ ಸಾರಿ ರೋಗಿಗಳಿನ್ನು ನಿರ್ಲಕ್ಷಿಸುತ್ತಿವೆ ಎಂದು ತಿಳಿಸಿದ್ದಾರೆ. 

ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಸಿ.ನಾಗರಾಜ್ ಅವರು ಮಾತನಾಡಿ, ಸಾರಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಆದರೆ, ಅವರಿಗೆ ಎಲ್ಲಿಗೆ ಹೋಗಬೇಕೆಂಬುದು ತಿಳಿಯುತ್ತಿಲ್ಲ. ಕೊರೋನಾ ಪರೀಕ್ಷಾ ವರದಿ ಪಡೆಯಲು ಎರಡು ದಿನಗಳ ಕಾಲಾವಕಾಶ ಬೇಕಾಗುತ್ತಿದೆ. ಕೆಲ ರೋಗಿಗಳು ಹಾಸಿಗೆಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಕೊರೋನಾ ವೈದ್ಯಕೀಯ ವರದಿ ಬರುವವರೆಗೂ ದಾಖಲು ಮಾಡಿಕೊಳ್ಳುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿಯಿಲ್ಲ. ಹೀಗಾಗಿ ಸಾರಿ ರೋಗಿಗಳಿಗಾಗಿ ಪ್ರತ್ಯೇಕ ಆಸ್ಪತ್ರೆ ಹಾಗೂ ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 

ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ.ಬಿ.ಆರ್.ವೆಂಕಟೇಶಯ್ಯ ಅವರು ಮಾತನಾಡಿ, ಆಸ್ಪತ್ರೆಯಲ್ಲಿ 360 ಹಾಸಿಗೆಗಳ ಪೈಕಿ 100 ಕೊರೋನಾ ರೋಗಿಗಳಿಗೆ ಹಾಗೂ 260 ಹಾಸಿಗೆಗಳನ್ನು ಸಾರಿ ಹಾಗೂ ಐಎಲ್ಐ ಪ್ರಕರಣಗಳಿಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ ಈಗಾಗಲೇ 250 ಹಾಸಿಗೆಗಳಲ್ಲಿ ರೋಗಿಗಳಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಕೂಡ ಇಂತಹ ರೋಗಿಗಳನ್ನು ದಾಖಲು ಮಾಡಿಕೊಳ್ಳಬೇಕು. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. 

SCROLL FOR NEXT