ರಾಜ್ಯ

ಲಾಕ್ ಡೌನ್ ಬದಲು ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಿ, ಅಗತ್ಯ ಬಿದ್ದರೆ ಲಾಕ್ ಡೌನ್ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಸಲಹೆ

Lingaraj Badiger

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ 1955 ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಜಿ‌ಲ್ಲೆಗಳಿಗೆ ಟೆಸ್ಟಿಂಗ್ ಗೆ ಅನುಕೂಲವಾಗಲಿ ಎಂದು 1 ಲಕ್ಷ ರ್ಯಾಪಿಡ್ ಆಂಟಿಜೆನ್ ಕಿಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಆ್ಯಂಬುಲೆನ್ಸ್ ಗಳನ್ನು ಖರೀದಿಗೆ ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಇಂದು 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿದರು.

ಸಭೆಯಲ್ಲಿ ಕೊರೋನಾ ಸಂಬಂಧ ಇಲ್ಲಿಯವರೆಗೂ ಜಿಲ್ಲಾಡಳಿತಗಳು ಯಾವೆಲ್ಲಾ ಕ್ರಮ ಕೈಗೊಂಡಿವೆ? ಜಿಲ್ಲಾಡಳಿತಗಳು ಕೊರೋನಾ ನಿಯಂತ್ರಣಕ್ಕೆ ಎಷ್ಟರ ಮಟ್ಟಿಗೆ ಯತ್ನಿಸಿವೆ? ಸೋಂಕಿತರ ಸಂಖ್ಯೆ ಎಷ್ಟಿದೆ? ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಎಷ್ಟಿದೆ? ಎಂಬ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೆ ಇತರೆ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವಂತೆ ನಾನು ಸೂಚನೆ ನೀಡುವುದಿಲ್ಲ. ಲಾಕ್ ಡೌನ್ ಬದಲು ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಿ. ಅಗತ್ಯ ಬಿದ್ದರೆ ಮಾತ್ರ ಲಾಕ್ ಡೌನ್ ಜಾರಿಗೊಳಿಸಿ ಎಂದು ಸಿಎಂ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಲಾಕ್ ಡೌನ್ ನಿಂದ ಜಾರಿಗೊಳಿಸುವುದರಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ನನಗೆ ಅನಿಸುವುದಿಲ್ಲ. ಪರಿಸ್ಥಿತಿ ಆಧರಿಸಿ ನಿಮ್ಮ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವ ನಿರ್ಧಾರವನ್ನು ನೀವೇ ಕೈಗೊಳ್ಳಿ ಎಂದು ಸಿಎಂ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ.

ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ಉಡುಪಿ, ಕಲಬುರಗಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ. ಬೀದರ್, ಧಾರವಾಡ, ಗದಗ, ಮೈಸೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು. 

ಇನ್ನು ಬೀದರ್ ಜಿಲ್ಲೆ ಸಾವಿನ ಪ್ರಮಾಣದಲ್ಲಿ ದೇಶದ 5 ಜಿಲ್ಲೆಗಳಲ್ಲಿ ಒಂದಾಗಿದ್ದು, ಮರಣ ಪ್ರಮಾಣ ನಿಯಂತ್ರಿಸುವಂತೆ ಸೂಚಿಸಿದರು. ಈ ವರೆಗೆ ಸಂಭವಿಸಿದ ಮರಣಗಳ ಕುರಿತು ತಜ್ಞರ ವಿಶ್ಲೇಷಣಾ ವರದಿಯನ್ನು ಕೂಡಲೇ ಕಳುಹಿಸುವಂತೆ ಸಿಎಂ ಸೂಚಿಸಿದ್ದಾರೆ.

SCROLL FOR NEXT