ನವದೆಹಲಿ: ಮಾರಕ ಕೊರೋನಾ ಸೋಂಕು ವೈದ್ಯಕೀಯ ಸಿಬ್ಬಂದಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಆಘಾತಕಾರಿ ಬೆಳವಣೆಗೆಯೊಂದರಲ್ಲಿ ನಗರದ ಪ್ರತಿಷ್ಠಿತ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ ಒಟ್ಟಾರೆ 17 ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ಒಕ್ಕರಿಸಿದೆ.
ಹೌದು... ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿಲ್ಲವಾದರೂ, ಆಸ್ಪತ್ರೆಯ 17 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಆಸ್ಪತ್ರೆಯ ಐದು ವೈದ್ಯರು ಮತ್ತು 12 ನರ್ಸ್ ಗಳಲ್ಲಿ ಸೋಂಕು ದೃಢವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯನ್ನು ಬಂದ್ ಮಾಡಲಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಸ್ಪತ್ರೆ ನಿರ್ದೇಶಕ ಡಾ.ಹೆಚ್.ಎಸ್ ಚಂದ್ರಶೇಖರ್ ಅವರು, ಐದು ವೈದ್ಯರು ಮತ್ತು 12 ಅರೆವೈದ್ಯಕೀಯ ಸಿಬ್ಬಂದಿ, ವಾರ್ಡ್ ಬಾಯ್ ಗಳು, ದಾದಿಯರು, ತಂತ್ರಜ್ಞರು, ಗ್ರೂಪ್ ಡಿ ಕಾರ್ಮಿಕರು ಸೇರಿದಂತೆ 17 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರ ವರದಿ ಮಂಗಳವಾರ ಸಂಜೆ ಪಾಸಿಟಿವ್ ಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾವು ಒಪಿಡಿಯನ್ನು ಮುಚ್ಚಿದ್ದೇವೆ. ಆದರೆ ನಮ್ಮ ತುರ್ತು ಸೇವೆಗಳು ಇನ್ನೂ ತೆರೆದಿದ್ದು, ನಮ್ಮದು ನಗರದಲ್ಲಿರುವ ಏಕೈಕ ಅಪಘಾತ ಚಿಕಿತ್ಸಾ ಆಸ್ಪತ್ರೆಯಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ರೋಗ ಲಕ್ಷಣಗಳಿಲ್ಲದ ವೈದ್ಯರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಗಳು ಮತ್ತು ಎನ್-95 ವಿತರಣೆ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಗಳನ್ನು ಪ್ರತಿನಿತ್ಯ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ. ಅಂತೆಯೇ ಆಸ್ಪತ್ರೆಯ ಎಲ್ಲ ವಾರ್ಡ್ ಗಳು ಮತ್ತು ಆಪರೇಷನ್ ಥಿಯೇಟರ್ ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿಸಿದರು.