ರಾಜ್ಯ

ಕೆಲಸ ಮಾಡುತ್ತಿದೆ 'ಅವೇಕ್ ಪ್ರೋನಿಂಗ್': ಒಂದೇ ವಾರದಲ್ಲಿ 800 ರ ಪೈಕಿ 500 ಜನರು ಗುಣಮುಖ!

Srinivas Rao BV

ಕೋವಿಡ್-19 ನ್ನು ಎದುರಿಸಲು ಭಿನ್ನ ಭಿನ್ನ ಮಾದರಿಯ ಚಿಕಿತ್ಸೆಗಳ ಮೊರೆ ಹೋಗುತ್ತಿದೆ ವೈದ್ಯ ಲೋಕ.  2 ವಾರಗಳ ಹಿಂದಷ್ಟೇ ಸರ್ಕಾರ ಘೋಷಣೆ ಮಾಡಿದ್ದ ಅವೇಕ್ ಪ್ರೋನಿಂಗ್ ಚಿಕಿತ್ಸಾ ವಿಧಾನ ಕೋವಿಡ್-19 ನಿಂದ ಗುಣಮುಖವಾಗುವುದಕ್ಕೆ ಒಂದಷ್ಟು ಆಶಾಕಿರಣ ಮೂಡಿಸಿದೆ.

ಅವೇಕ್ ಪ್ರೋನಿಂಗ್ ವಿಧಾನದ ಮೂಲಕ ಚಿಕಿತ್ಸೆ ಪಡೆದಿದ್ದ 800 ಜನರ ಪೈಕಿ 500 ಜನರು ಕೋವಿಡ್-19 ನಿಂದ ಕೇವಲ ಒಂದು ವಾರದಲ್ಲಿ ಗುಣಮುಖರಾಗಿದ್ದಾರೆ.

ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಕಲ್ಯಾಣ ಕರ್ನಾಟಕ ಪ್ರದೇಶದ 45 ವರ್ಷದ ವೈದ್ಯರೊಬ್ಬರು ಅವೇಕ್ ಪ್ರೋನಿಂಗ್ ವಿಧಾನದ ಮೂಲಕ ಕೋವಿಡ್-19 ಗುಣಮುಖರಾಗಿದ್ದಾರೆ.

ಪ್ರಾರಂಭದ ದಿನಗಳಲ್ಲಿ ಅವರ ಪರಿಸ್ಥಿತಿ ಹದಗೆಟ್ಟಿತ್ತು. ಪ್ರತಿ ದಿನಕ್ಕೆ 4-5 ಲೀಟರ್ ನಷ್ಟು ಆಕ್ಸಿಜನ್ ಅಗತ್ಯವಿತ್ತು. ಆದರೆ ಅವೇಕ್ ಪ್ರೋನಿಂಗ್ ಚಿಕಿತ್ಸಾ ವಿಧಾನ ಪ್ರಯೋಗಿಸಿದ ನಂತರ ಅವರ ಆರೋಗ್ಯ ಸುಧಾರಣೆಯಾಯಿತು. ಒಂದು ವಾರದ ಅವಧಿಯಲ್ಲಿ ಉತ್ತಮ ಫಲಿತಾಂಶ ದೊರೆಯಲಾರಂಭಿಸಿ ಆಕ್ಸಿಜನ್ ಅಗತ್ಯತೆಯಿಂದ ಹೊರಬಂದರು. ಪ್ರಮಾಣೀಕೃತ ಥೆರೆಪಿಗಳ ಜೊತೆಗೆ ಆಕ್ಟೀವ್ ಪ್ರೋನಿಂಗ್ ನ್ನೂ ಮಾಡಲಾಯಿತು ಎನ್ನುತ್ತಾರೆ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ ನ ಸದಸ್ಯ ಹಾಗೂ ಮಣಿಪಾಲ್ ಆಸ್ಪತ್ರೆಯ  ಬೋರ್ಡ್ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ವಿಭಾಗದ  ಅಧ್ಯಕ್ಷ ಡಾ. ಅನೂಪ್ ಅಮರನಾಥ್.

ಅವೇಕ್ ಪ್ರೋನಿಂಗ್ ಎಂದರೇನು?

ಅವೇಕ್ ಪ್ರೋನಿಂಗ್ ಚಿಕಿತ್ಸಾ ವಿಧಾನದಲ್ಲಿ ರೋಗಿಗಳನ್ನು, ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ ಹೊಟ್ಟೆ ಕೆಳಭಾಗಕ್ಕೆ ಬರುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತದೆ. ದಿನವೊಂದಕ್ಕೆ 16-18 ಗಂಟೆಗಳ ಕಾಲ ಈ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ.

ಕೋವಿಡ್-19 ಸೋಂಕು ತೀವ್ರವಾದ ಹಂತಕ್ಕೆ ಹೋದ 300 ರೋಗಿಗಳಿಗೆ ಮಾತ್ರ ಈ ಚಿಕಿತ್ಸಾ ವಿಧಾನ ಕೆಲಸ ಮಾಡಿಲ್ಲ. ಪ್ರಾರಂಭಿಕ ಹಂತದಲ್ಲಿದ್ದವರಿಗೆ ಈ ಚಿಕಿತ್ಸಾ ವಿಧಾನ ಫಲಿಸುತ್ತಿದೆ ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಡಾ ಅಮರ್ ನಾಥ್ ಹೇಳಿದ್ದಾರೆ.

ಸರ್ವೈಕಲ್ ಸ್ಪಾಂಡಿಲೋಸಿಸ್ ಎದುರಿಸುತ್ತಿರುವ ಗರ್ಭಿಣಿ ಮಹಿಳೆಯರಿಗೆ ಈ ಚಿಕಿತ್ಸಾ ವಿಧಾನ ಸೂಕ್ತವಲ್ಲ ಎಂದೂ ವೈದ್ಯರು ತಿಳಿಸಿದ್ದಾರೆ.

SCROLL FOR NEXT