ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಹಿಂದೂಸ್ಥಾನ್ ಏರೋನಾಟಿಸ್ಕ್ ಲಿಮಿಟಿಡ್, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಘಾಟೇಜ್ ಕನ್ವೆನ್ಷನ್ ಸೆಂಟರ್'ನ್ನು ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಡಿಸಿದ್ದು, ಬಿಬಿಎಂಪಿಗೆ ಶುಕ್ರವಾರ ಹಸ್ತಾಂತರ ಮಾಡಿದೆ.
ಈ ಕೋವಿಡ್ ಕೇಂದ್ರದಲ್ಲಿ ಒಟ್ಟು 160 ಹಾಸಿಗೆಗಳಿದ್ದು, ಮೂಲಭೂತ ಸೌಕರ್ಯಗಳಾದ ಶೌಚಾಲಯ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಕೋವಿಡ್ ಕೇಂದ್ರವನ್ನು 16 ದಿನಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಕೋವಿಡ್ ಕೇರ್ ಕೇಂದ್ರವನ್ನು ಲಕ್ಷಣರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಬಹುದಾಗಿ ಎಂದು ಹೆಚ್ಎಎಲ್ ಮಾನವ ಸಂಪನ್ಮೂಲ ನಿರ್ದೇಶಕ ಅಲೋಕ್ ವರ್ಮಾ ಅವರು ಹೇಳಿದ್ದಾರೆ.
ಎಚ್‌ಎಎಲ್ ಪ್ರಧಾನ ವ್ಯವಸ್ಥಾಪಕ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಚ.ವೆಂಕಟೇಶ್ವರ ರಾವ್ ಮತ್ತು ಬಿಬಿಎಂಪಿಯ ಮಹಾದೇವಪುರ ವಲಯದ ಜಂಟಿ ಆಯುಕ್ತ ಆರ್.ವೆಂಕಟಾಚಲಪತಿ ಅವರು ಸರ್ಕಾರಿ ಹಿರಿಯ ಅಧಿಕಾರಿಗಳು ಮತ್ತು ಎಚ್‌ಎಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.