ರಾಜ್ಯ

ಮಂಡ್ಯ: ಕೌಟುಂಬಿಕ ಕಲಹ, ಮಗನಿಂದಲೇ ತಾಯಿ ಹತ್ಯೆ ಶಂಕೆ?

Lingaraj Badiger

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನಿಂದಲೇ ತಾಯಿಯ ಬರ್ಬರ ಹತ್ಯೆ ನಡೆದಿರುವ ಘಟನೆ ಮಂಡ್ಯದ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಮಧುಸೂಧನ್ ಅವರ ಪತ್ನಿ ಶ್ರೀಲಕ್ಷ್ಮಿ(೪೫)ಮಗನಿಂದ ಕೊಲೆಯಾದ ದುರ್ದೈವಿ. ಮೂಲತಃ ಚಿಕ್ಕಮಗಳೂರಿನವರಾದ ಶ್ರೀ ಲಕ್ಷ್ಮಿ ಅವರು ಮೇಲುಕೋಟೆಯ ಮಧುಸೂಧನ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಗಂಡ ಮತ್ತು ಇನ್ನೊಬ್ಬ ಕಿರಿಯ ಮಗ ಹೊರಗೆ ಹೋಗಿದ್ದ ಸಮಯದಲ್ಲಿ ಮನೆಗೆ ಬಂದ ಈತ ತಾಯಿಯೊಂದಿಗೆ ಜಗಳಕ್ಕಿಳಿದಿದ್ದಾನೆ, ಈ ವೇಳೆ ಇಬ್ಬರ ನಡುವಿನ ಜಗಳ ಅತಿರೇಕಕ್ಕೆ ಹೋಗಿ ಮಗನೇ ಚಾಕುವಿನಿಂದ ಇರಿದು ತಾಯಿಯನ್ನು ಕೊಂದು ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ರಾತ್ರಿ ಮನೆಗೆ ಬಂದ ಗಂಡ ಮತ್ತು ಮಕ್ಕಳು ಶ್ರೀಲಕ್ಷ್ಮಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭರಾಣಿ, ಡಿವೈಎಸ್ಪಿ ನವೀನುಕುಮಾರ್, ಸಿಪಿಐ ಸಂತೋಷ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ತಾಯಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿ ಮಗ ಸಿಕ್ಕಿಬಿದ್ದಿದ್ದು ಪೊಲೀಸರ ವಶದಲ್ಲಿದ್ದಾನೆ. ಕೊಲೆಗೆ ನಿಕರ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರೇಮ ವಿಚಾರದಲ್ಲಿ ಗಲಾಟೆಯಾಗಿದೆ. ಜೊತೆಗೆ ಈತ ಮಾದಕವ್ಯಸನಿಯೂ ಆಗಿದ್ದ ಎಂಬ ಮಾಹಿತಿ ಸ್ಥಳಿಯವಾಗಿ ಕೇಳಿ ಬಂದಿದ್ದು ಇದೇ ವಿಚಾರದಲ್ಲಿ ಅಮ್ಮ ಮಗನ ನಡುವೆ ಜಗಳ ನಡೆದು ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದು ತನಿಖೆ ಚುರುಕುಗೊಳಿಸಿದ್ದರೆ.

ಕೊಲೆಗೀಡಾದ ಶ್ರೀಲಕ್ಷ್ಮಿ ಅವರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮ ಮೇಲುಕೋಟೆಯ ಬಳಿ ನಡೆಯಿತು ಎಂದು ತಿಳಿದು ಬಂದಿದೆ.

ಈ ಸಂಬಂಧ ಪಶ್ವಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ನಾಗಯ್ಯ

SCROLL FOR NEXT