ರಾಜ್ಯ

ಗೌರವಧನ ಹೆಚ್ಚಳದ ಭರವಸೆ: 20 ದಿನಗಳ ಬಳಿಕ ಪ್ರತಿಭಟನೆ ಕೈ ಬಿಟ್ಟ ಆಶಾ ಕಾರ್ಯಕರ್ತೆಯರು, ಕೆಲಸಕ್ಕೆ ಹಾಜರ್

Srinivasamurthy VN

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಒತ್ತಾಯಿಸಿ ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಮನವೊಲಿಸುವಲ್ಲಿ ಕೊನೆಗೂ ಸರ್ಕಾರ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರು ತಮ್ಮ ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ನಿನ್ನೆ ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮತ್ತು ಆಶಾ ರಾಜ್ಯದ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಆವರು, ಮಾಸಿಕ ರೂ.12 ಸಾವಿರ ಗೌರವ ಧನ ನೀಡುವ ಕುರಿತು ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಆಶಾ (ASHA-Accredited Social Health Activists(ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು) ಕಾರ್ಯಕರ್ತೆಯರು ಮುಷ್ಕರ ಹಿಂಪಡೆದಿದ್ದಾರೆ. 

ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾಯಲು ಹಾಗೂ ಆಂತರಿಕ ಸಭೆ ನಡೆಸಿದ ಬಳಿಕ ಮುಷ್ಕರ ಹಿಂಪಡೆಯುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ 'ತಿಂಗಳಿಗೆ 12 ಸಾವಿರ ರೂ ಗೌರವಧನ ನೀಡುವುದು ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿಎನ್. ಅಶ್ವತ್ಥ ನಾರಾಯಣ ಅವರು ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದು ಹೇಳಿದೆ. 

‘ಜುಲೈ 10ರಿಂದ ಪ್ರತಿಭಟನೆ ನಡೆಸುತ್ತಿದ್ದೆವು. ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಥಳಕ್ಕೆ ಬಂದು, ಬೇಡಿಕೆ ಈಡೇರಿಸುವುದಾಗಿ ಖಚಿತ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ವಿಶ್ವಾಸದಿಂದ ತೆಗೆದುಕೊಂಡು, ಪ್ರತಿಭಟನೆ ವಾಪಸ್‌ ಪಡೆದಿದ್ದೇವೆ. 30ರಿಂದಲೇ ಎಲ್ಲ ಕಾರ್ಯಕರ್ತರು ಕೆಲಸಕ್ಕೆ ಹಾಜರಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ಕೆ. ಸೋಮಶೇಖರ್‌ ಯಾದಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇಂದು ಕೆಲಸಕ್ಕೆ ಹಾಜರು
20 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಆಶಾ ಕಾರ್ಯಕರ್ತರು, ಸರ್ಕಾರದಿಂದ ಬೇಡಿಕೆ ಈಡೇರಿಕೆಯ ಭರವಸೆ ಸಿಗುತ್ತಿದ್ದಂತೆಯೇ ಗುರುವಾರದಿಂದ ಕೆಲಸಕ್ಕೆ ಮರಳಿದ್ದಾರೆ. 

SCROLL FOR NEXT