ರಾಜ್ಯ

ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳು: ಗಂಟೆಗಟ್ಟಲೆ ಸಾಲಿನಲ್ಲಿ ನಿಂತ ಯೋಧರ ಕುಟುಂಬಗಳು

Manjula VN

ಬೆಂಗಳೂರು: ಸೂಕ್ತ ವ್ಯವಸ್ಥೆ ಕಲ್ಪಿಸದೆ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ರಿಯಾಯಿತಿ ದರದ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಯೋಧರು, ಮಾಜಿ ಯೋಧರು ಹಾಗೂ ಅವರ ಕುಟುಂಬ ಸದಸ್ಯರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸಂಕಷ್ಟ ಅನುಭವಿಸಿದ ಘಟನೆ ನಗರದ ಹೆಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಐಎಎಫ್ ಕ್ಯಾಂಟೀನ್ ನಲ್ಲಿ ನಡೆದಿದೆ. 

ರಿಯಾಯಿತಿ ದರದಲ್ಲಿ ದಿನಸಿ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ಬಳಿಕ ನೂರಾರು ಮಾಜಿ ಯೋದರು, ಹಾಗೂ ಅವರ ಕುಟುಂಬ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದಿರುವುದು ಹಾಗೂ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿರುವುದು ಯೋಧರು ಹಾಗೂ ಯೋಧರ ಕುಟುಂಬಗಳಿಗೆ ಬೇಸರ ತರಿಸಿದೆ. 

ಕ್ಯಾಂಟೀನ್ ಮುಖ್ಯದ್ವಾರದ ಬಳಿ ಸಾಲಿನಲ್ಲಿ ನಿಲ್ಲಿಸಲಾಗಿದ್ದು, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಕಷ್ಟಕರವಾಗಿತ್ತು. ರಸ್ತೆಗಳ ಮಧ್ಯೆಯೇ ವಾಹನ ನಿಲುಗಡೆ ಮಾಡಿರುವುದೂ ಕೂಡ ಸ್ಥಳದಲ್ಲಿ ಸಂಚಾರ ದಟ್ಟಣೆ ಎದುರು ಮಾಡಿತ್ತು. 

ಮಾಜಿ ಯೋಧರೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ದಿನಸಿ ಸಾಮಾಗ್ರಿ ಖರೀದಿ ಮಾಡುವ ಸಲುವಾಗಿ ಮಗಳ ಜೊತೆಗೆ ತೆರಳಿದ್ದೆ. ಸ್ಥಳದಲ್ಲಿ ಯಾವುದೇ ರೀತಿಯ ವ್ಯವಸ್ಥೆಗಳನ್ನೂ ಮಾಡಿರಲಿಲ್ಲ. ಬೆಳಿಗ್ಗೆ 8.30ಕ್ಕೆ ಸಾಲಿನಲ್ಲಿ ನಿಂತರೂ 11.30 ಆದರೂ ಖರೀದಿ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

 ಐಎಎಫ್ ಅಧಿಕಾರಿಯ ಪತ್ನಿ ಮಾತನಾಡಿ, ದಿನಸಿ ಸಾಮಾಗ್ರಿ ಖರೀದಿ ಮಾಡಲಷ್ಟೇ ನಾವು ಇಲ್ಲಿಗೆ ಬಂದಿದ್ದೇವೆ. ಈ ಮಟ್ಟಕ್ಕೆ ಜನರಿರುತ್ತಾರೆಂದುಕೊಂಡಿರಲಿಲ್ಲ. ಸ್ಥಳದಲ್ಲಿ ಸಾಕಷ್ಟು ಹಿರಿಯ ನಾಗರೀಕರಿದ್ದರು. ಸಾಕಷ್ಟು ಮಂದಿ ರಿಯಾಯಿತಿ ದರದ ಮದ್ಯ ಖರೀದಿ ಮಾಡಲು ಬಂದಿದ್ದರು ಎಂದು ತಿಳಿಸಿದ್ದಾರೆ. 

ಈ ನಡುವೆ ಸ್ಥಳದಲ್ಲಿ ಕೆಲ ಮಾತಿನ ಚಕಮಕಿಗಳೂ ಕೂಡ ನಡೆದಿದ್ದು, ಈ ವೇಳೆ ಲೌಡ್ ಸ್ಪೀಕರ್ ನಲ್ಲಿ ಘೋಷಣೆ ಮಾಡಲು ಆರಂಭಿಸಿದ ಅಧಿಕಾರಿಗಳು, ಶಾಂತಿಯುತವಾಗಿರುವಂತೆ ಮನವಿ ಮಾಡಿಕೊಂಡರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವುದರಿಂದ ಒಂದು ಬಾರಿ ಕೇವಲ 5 ಮಂದಿಯನ್ನಷ್ಟೇ ಒಳಗೆ ಬಿಡಲಾಗುತ್ತಿದೆ. ಸಂಜೆ 6 ಗಂಟೆಯವರೆಗೂ ಸಮಯವನ್ನು ವಿಸ್ತರಿಸಲಾಗುತ್ತದೆ. ಟೋಕನ್ ಗಳನ್ನು ವಿತರಿಸಲಾಗುತ್ತದೆ. ಎಲ್ಲರಿಗೂ ಎಲ್ಲಾ ಸಾಮಾಗ್ರಿಗಳೂ ಲಭಿಸಲಿವೆ ಎಂದು ತಿಳಿಸಿದ್ದಾರೆ 

SCROLL FOR NEXT