ರಾಜ್ಯ

ಬೆಂಗಳೂರು: ಕೆಫೆ ಮಾಲೀಕನ ಅಪಹರಣ, ಮ್ಯಾನೇಜರ್ ಸೇರಿ 9 ಮಂದಿ ಬಂಧನ

Lingaraj Badiger

ಬೆಂಗಳೂರು: ಕೆಫೆ ರೆಸ್ಟೋರೆಂಟ್ ಮಾಲೀಕರೊಬ್ಬರನ್ನು ಅಪಹರಿಸಿ 26 ಲಕ್ಷ ನಗದು, ದುಬಾರಿ ಆಡಿ ಕಾರು ಸುಲಿಗೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೈಗ್ರೌಂಡ್ಸ್ ನ ಕೆಫೆ ರೆಸ್ಟೋರೆಂಟ್‌ನ ಮ್ಯಾನೇಜರ್ ಶರತ್ ಕುಮಾರ್, ರಾಜ್ ಕಿರಣ್, ಹೇಮಂತ್, ವಾಸೀಂ, ಲೋಕೇಶ್, ಅರುಣ್ ಕುಮಾರ್, ಥಾಮಸ್, ಡ್ಯಾನಿಯಲ್ ಬಂಧಿತ ಆರೋಪಿಗಳು.

ಕಳೆದ ಮೇ 13ರಂದು ನ್ಯೂ ಬಿಇಎಲ್ ರಸ್ತೆಯಲ್ಲಿ ಕೆಫೆ ಮಾಲೀಕ ಅಭಿನವ್ ಸಿಂಘಾಲ್ ಅವರನ್ನು ಅಪಹರಿಸಿದ್ದ ಆರೋಪಿಗಳು, ಅವರನ್ನು ಬನ್ನೇರುಘಟ್ಟ ರಸ್ತೆಯ ಗೋದಾಮೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಆಡಿ ಕಾರು, ಚಿನ್ನಾಭರಣ, 26 ಲಕ್ಷ ನಗದು ಸುಲಿಗೆ ಮಾಡಿ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಸಿ ಕಳುಹಿಸಿದ್ದರು.

ಈ ಮೊದಲು ಇದರ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೊಲೀಸರು ಆರೋಪಿಗಳನ್ನು ಕರೆತಂದು ಬಿಟ್ಟು ಕಳುಹಿಸಿದ್ದಾರೆ ಎಂದು ಅಭಿನವ್ ಸಿಂಘಾಲ್ ಅವರು ಸದಾಶಿವನಗರ ಪೊಲೀಸರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸದಾಶಿವನಗರ ಠಾಣೆಯಿಂದ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್‌ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ
ಆರೋಪಿ ಶರತ್‍ ಕುಮಾರ್ ಕೆಫೆ ರೆಸ್ಟೋರೆಂಟ್‍ ನಲ್ಲಿ ಮ್ಯಾನೇಜರ್ ಆಗಿದ್ದು, ಆತನೇ ಇತರ ಆರೋಪಿಗಳನ್ನು ತನ್ನ ಸ್ನೇಹಿತರೆಂದು ನನಗೆ ಪರಿಯಚ ಮಾಡಿಸಿದ್ದ‌. ಆರೋಪಿಗಳಾದ ಹೇಮಂತ್ ಮತ್ತು ಡ್ಯಾನಿಯಲ್ ನನ್ನ ಆಡಿ ಕಾರ್ ಮೂಲಕ ಅಪಘಾತ ಮಾಡಿಸಿದ್ದಾನೆ.

ನಂತರ ಕಾರನ್ನು ವಿಲ್ಸನ್ ಗಾರ್ಡನ್‍ನಲ್ಲಿದ್ದ ಥಾಮಸ್‍ನ ಜೋಸೆಫ್ ಆಟೋ ಗ್ಯಾರೇಜ್‍ಗೆ ರಿಪೇರಿಗೆ ತೆಗೆದುಕೊಂಡು ಹೋದರು. ಮೇ13 ರಂದು ರಾಜ್ ಕಿರಣ್ ಮತ್ತು ಆತನ ಇಬ್ಬರು ಸ್ನೇಹಿತರು ನನ್ನನ್ನ ಗ್ಯಾರೇಜಿಗೆ ಕರೆದುಕೊಡು ಹೋಗುತ್ತೇನೆ ಎಂದು ಹೇಳಿ ಬನ್ನೇರುಘಟ್ಟ ಕಾಡಿನ ಮಧ್ಯೆ ಇರುವ ಗೋಡಾನ್‍ಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ, ನನ್ನ ಬ್ಯಾಗಿನಲ್ಲಿದ್ದ ಚೆಕ್ ಬುಕ್, ರೆಸ್ಟೋರೆಂಟ್, ಕಾರಿಗೆ ಸಂಬಂಧಿಸಿದ ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡರು ಎಂದು ಅಭಿನವ್ ಸಿಂಘಾಲ್ ದೂರಿನಲ್ಲಿ ತಿಳಿಸಿದ್ದರು.

ಚಾಕು, ಕತ್ತಿ ತೋರಿಸಿ ನಾವು ಹೇಳಿದಂತೆ ಕೇಳಬೇಕು ಎಂದು ಬೆದರಿಸಿ ಜಯನಗರದ ಬ್ಯಾಂಕ್‍ಗೆ ಕಾರಿನಲ್ಲಿ ಕರೆದುಕೊಂಡು ಹೋಗಿ 2 ಚೆಕ್‍ಗಳ ಮೂಲಕ 9 ಲಕ್ಷ ಹಣವನ್ನು ಡ್ರಾ ಮಾಡಿಕೊಂಡರು. ನಂತರ ನಗರದ ವಿವಿಧೆಡೆ ನನ್ನನ್ನು ಕೂಡಿ ಹಾಕಿ ಚಿನ್ನದ ಸರ, ಉಂಗುರ, ಕಿತ್ತುಕೊಂಡರು.

ಬಳಿಕ ಎಟಿಎಂ ಮೂಲಕ 55 ಸಾವಿರ ಮತ್ತು ಪರ್ಸ್ ನಲ್ಲಿದ್ದ 37 ಸಾವಿರ ಹಣವನ್ನು ಕಿತ್ತುಕೊಂಡರು. ಮತ್ತೆ 16 ಲಕ್ಷ ರೂಪಾಯಿಯನ್ನು ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡರು. ಕೊನೆಯಲ್ಲಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಸಿ ಹೆಬ್ಬಾಳದ ಬಳಿ ಬಿಟ್ಟು ಪರಾರಿಯಾದರು ಎಂದು ಅಭಿನವ್ ದೂರಿನಲ್ಲಿ ತಿಳಿಸಿದ್ದರು.

SCROLL FOR NEXT