ಕರ್ನಾಟಕಕ್ಕೆ ಕೊರೋನಾಘಾತ: ಇಂದು ಹೊಸದಾಗಿ 239 ಪ್ರಕರಣ ಪತ್ತೆ, 5,452ಕ್ಕೇರಿದ ಸೋಂಕಿತರ ಸಂಖ್ಯೆ, 2 ಬಲಿ!
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಶನಿವಾರ ಸಹ ಬರೋಬ್ಬರಿ 239 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಬೆಂಗಳೂರು ನಗರದ 61 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮಧುಮೇಹ, ರಕ್ತದೊತ್ತಡ, ಹೈಫೋ ಥೈರಾಡಿಸಮ್ ನಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂ.6ರಂದು ಇವರಿಗೆ ಸೋಂಕು ದೃಢಪಟ್ಟಿತ್ತು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ 57 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಆನೆಕಾಲು ರೋಗ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಜೂ 7ರಂದು ಮೃತಪಟ್ಟಿದ್ದರು. ನಂತರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದಿದೆ.
ಇದರಿಂದ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 63ಕ್ಕೇರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 143 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 2132 ಜನರು ಗುಣಮುಖರಾಗಿದ್ದು, 3257 ಸಕ್ರಿಯ ಪ್ರಕರಣಗಳಿವೆ.
ಈ ನಡುವೆ, ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಸೋಂಕಿತ ಪ್ರಕರಣಗಳ ವರದಿಯಿಂದ ಆತಂಕ ಮೂಡಿಸಿದ್ದ ಉಡುಪಿಯಲ್ಲಿ ಇಂದು ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಭಾನುವಾರ ಕೇವಲ 13 ಪ್ರಕರಣಗಳು ವರದಿಯಾಗಿವೆ.
ಕಲಬುರಗಿ ಮತ್ತು ಯಾದಗಿರಿಯಲ್ಲಿ ತಲಾ 39, ಬೆಳಗಾವಿಯಲ್ಲಿ 38, ಬೆಂಗಳೂರು ನಗರದಲ್ಲಿ 23, ದಕ್ಷಿಣ ಕನ್ನಡ ಮತ್ತು ದಾವಣಗೆರೆಯಲ್ಲಿ 17, ಉಡುಪಿಯಲ್ಲಿ 13, ಶಿವಮೊಗ್ಗದಲ್ಲಿ 12, ವಿಜಯಪುರದಲ್ಲಿ 9, ಬೀದರ್ ನಲ್ಲಿ 7, ಬಳ್ಳಾರಿಯಲ್ಲಿ 6, ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ತಲಾ 5, ಧಾರವಾಡದಲ್ಲಿ 3, ಗದಗ ಮತ್ತು ಉತ್ತರ ಕನ್ನಡದಲ್ಲಿ ತಲಾ 2, ಮಂಡ್ಯ, ರಾಯಚೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.