ಪ್ರತಿಭೆಗಳ ಕೊರತೆ: ಹೂಡಿಕೆಗೆ ಭಾರತದ 2ನೇ ಹಂತದ ನಗರಗಳತ್ತ ಡೆನ್ಮಾರ್ಕ್ ಚಿತ್ತ, ವರದಿ ಏನು ಹೇಳುತ್ತದೆ?

ಬೆಂಗಳೂರು: ಕೊಯಮತ್ತೂರು, ಅಹಮದಾಬಾದ್, ತಿರುವನಂತಪುರಂ, ವಡೋದರಾ ಮತ್ತು ಇಂದೋರ್‌ನಂತಹ ಎರಡನೇ ಹಂತದ ನಗರಗಳನ್ನು ಸಂಭಾವ್ಯ ಹೂಡಿಕೆ ತಾಣಗಳನ್ನಾಗಿ ಪರಿಗಣಿಸಲು ಡೆನ್ಮಾರ್ಕ್ ಆಸಕ್ತಿ ತೋರಿದೆ. ಈ ನಗರಗಳಲ್ಲಿ “ಕಾರ್ಯಾಚರಣೆಯ ವೆಚ್ಚ ಗಣನೀಯವಾಗಿ ಕಡಿಮೆ, ಉದ್ಯೋಗಿಗಳ ಕೆಲಸ ತೊರೆಯುವ ಪ್ರಮಾಣ ಕಡಿಮೆ ಹಾಗೂ ರಾಜ್ಯ ಸರ್ಕಾರಗಳ ಪ್ರೋತ್ಸಾಹಕ ಯೋಜನೆಗಳು ಪೂರಕವಾಗಿವೆ” ಎಂಬ ಕಾರಣಕ್ಕೆ ಡೆನ್ಮಾರ್ಕ್ ಈ ನಗರಗಳತ್ತ ಗಮನಹರಿಸಿದೆ.
ಬೆಂಗಳೂರಿನಲ್ಲಿರುವ ಡೆನ್ಮಾರ್ಕ್‌ನ ಇನ್ನೋವೇಶನ್ ಸೆಂಟರ್ ಸಿದ್ಧಪಡಿಸಿರುವ ‘ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದ ಪ್ರತಿಭೆಗಳ ಲಭ್ಯತೆ’ (Access to Tech Talent in India) ಎಂಬ ವರದಿಯಲ್ಲಿ ಈ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ. ಡೆನ್ಮಾರ್ಕ್‌ನ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸ್ಸೆನ್ ಬೆಂಗಳೂರಿನಲ್ಲಿ ವರದಿಯನ್ನು ಬಿಡುಗಡೆ ಮಾಡಿದರು.
ಡೆನ್ಮಾರ್ಕ್ ಎದುರಿಸುತ್ತಿರುವ ಪ್ರಮುಖ ಸವಾಲೊಂದನ್ನು ವರದಿ ಎತ್ತಿ ತೋರಿಸಿದೆ. ದೇಶವು ಉತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ಉನ್ನತ ಜೀವನಮಟ್ಟವನ್ನು ಹೊಂದಿದ್ದರೂ, ಐಟಿ ತಜ್ಞರನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಡೆನ್ಮಾರ್ಕ್ ಕಂಪನಿಗಳು ಕಷ್ಟಪಡುತ್ತಿವೆ. ಈ ಉನ್ನತ ಕೌಶಲಗಳ ಲಭ್ಯತೆ ಇಲ್ಲದಿದ್ದರೆ, ಆರ್ಥಿಕ ಬೆಳವಣಿಗೆ ನಿಧಾನಗೊಳ್ಳಬಹುದು, ಡೆನ್ಮಾರ್ಕ್‌ನ ಸ್ಪರ್ಧಾತ್ಮಕ ಸಾಮರ್ಥ್ಯ ಕುಗ್ಗಬಹುದು ಮತ್ತು ಉದ್ಯಮ ವಲಯದ ನಾವೀನ್ಯತೆಗೆ ಅಡ್ಡಿಯಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, ಐಟಿ ಮತ್ತು ಎಂಜಿನಿಯರಿಂಗ್ ಪದವೀಧರರ ಸೀಮಿತ ದೇಶೀಯ ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಡೆನ್ಮಾರ್ಕ್‌ನಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಂತಹ ಉದ್ಯಮಸ್ನೇಹಿ ನೀತಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCC) ಸ್ಥಾಪಿಸಲು ಡೆನ್ಮಾರ್ಕ್ ಕಂಪನಿಗಳು ಆಸಕ್ತಿ ತೋರಿವೆ.
ಕರ್ನಾಟಕದ ಜಿಸಿಸಿ ನೀತಿ ಮತ್ತು ತಮಿಳುನಾಡಿನ ಜಾಗತಿಕ ಸಾಮರ್ಥ್ಯ ಕೇಂದ್ರ ಯೋಜನೆ ಸ್ಥಳೀಯ ಹೂಡಿಕೆಗೆ ಸಕ್ರಿಯವಾಗಿ ಉತ್ತೇಜನ ನೀಡುತ್ತಿವೆ. ಈ ನಗರಗಳಲ್ಲಿ ಹಲವು ನಿರ್ದಿಷ್ಟ ಕ್ಷೇತ್ರಗಳ ಪರಿಣತಿಯನ್ನೂ ಹೊಂದಿವೆ. ಉದಾಹರಣೆಗೆ, ವಾಹನ ತಂತ್ರಜ್ಞಾನದಲ್ಲಿ ಪುಣೆ ಮತ್ತು ಸರಕು ಸಾಗಣೆ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಚೆನ್ನೈ ಪ್ರಮುಖವಾಗಿವೆ. ಅಲ್ಲದೆ, ವಿಶ್ವವಿದ್ಯಾಲಯಗಳ ಸಮೀಪದಲ್ಲಿರುವುದರಿಂದ ಪ್ರತಿಭಾವಂತ ಉದ್ಯೋಗಿಗಳ ಲಭ್ಯತೆಯೂ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದ ಜಿಸಿಸಿ ನೀತಿಯ ಜೊತೆಗೆ, ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಸಿಸಿಗಳ ವಿಸ್ತರಣೆಗೆ ಪೂರಕವಾಗಿರುವ ಬಾಡಿಗೆ ಮತ್ತು ಕೌಶಲಾಭಿವೃದ್ಧಿ ಪ್ರೋತ್ಸಾಹಧನ, ಹೂಡಿಕೆ ಸಬ್ಸಿಡಿ, ಮೂಲಸೌಕರ್ಯ ಬೆಂಬಲ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಆ್ಯಂಡ್ ಡಿ) ನೀಡುವ ಅನುದಾನಗಳ ಬಗ್ಗೆಯೂ ವರದಿಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ ಮತ್ತು ನವದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ನಗರಗಳು ಎಂಜಿನಿಯರಿಂಗ್ ಪ್ರತಿಭೆಗಳ ಹೆಚ್ಚಿನ ಲಭ್ಯತೆ, ಬಲಿಷ್ಠ ಸ್ಟಾರ್ಟ್‌ಅಪ್ ಚಟುವಟಿಕೆ, ವೆಂಚರ್ ಕ್ಯಾಪಿಟಲ್‌ಗೆ ಸುಲಭ ಪ್ರವೇಶ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ವಲಯದ ನಡುವಿನ ನಿಕಟ ಸಂಪರ್ಕ ಹೊಂದಿರುವ ಪ್ರಮುಖ ಕೇಂದ್ರಗಳೆಂದು ಗುರುತಿಸಲಾಗಿದೆ.
ಡೆನ್ಮಾರ್ಕ್‌ನ ಪ್ರತಿಭಾ ಕೊರತೆಗೆ ಪ್ರಮುಖ ಪರಿಹಾರವಾಗಿ ಭಾರತದಿಂದ ನೇರವಾಗಿ ಉದ್ಯೋಗಿಗಳನ್ನು ಕರೆಸಿಕೊಳ್ಳುವುದಕ್ಕಿಂತ, ಸೂಕ್ತ ಮತ್ತು ಕಾರ್ಯತಂತ್ರದ ಸ್ಥಳಗಳಲ್ಲಿ ಆಫ್‌ಶೋರ್ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



