ಹುಬ್ಬಳ್ಳಿ: ಹೃದಯ ಮಿಡಿಯಬಹುದಾದ ಘಟನೆಯೊಂದರಲ್ಲಿ ಕಾಡಿನಲ್ಲಿರುವ ಕೋತಿಯೊಂದು ತನ್ನ ಕಾಲುಗಳಿಗಾದ ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಯೊಂದಕ್ಕೆ ಬಂದಿದೆಯಲ್ಲದೆ ತನಗೆ ಚಿಕಿತ್ಸೆ ಮಾಡಲು ಜನರಿಗೆ ಸಹಕಾರ ನೀಡಿದೆ.
ಜೂನ್ 5 ರಂದು ಈ ಕುರಿತ ವಿಡಿಯೋ ವೈರಲ್ ಆಗಿದ್ದು ಉತ್ತರ ಕನ್ನಡದ ದಾಂಡೇಲಿ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಚಿಕಿತ್ಸೆ ಕೋರಿ ಕೋತಿಯು ಸಾಲಿನಲ್ಲಿ ನಿಂತಿದ್ದು ಕಾಣಿಸಿದೆ.
ಮೊದಲಿಗೆ ಆಸ್ಪತ್ರೆಯವರು ಗಾಯಾಳು ಕೋತಿಯನ್ನು ದೂರ ಓಡಿಸಲು ನಿರ್ಧರಿಸಿದ್ದಾರೆ. ಆದರೆ ಸ್ಥಳೀಯರು ಕೋತಿಯ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕೋತಿಗೆ ಚಿಕಿತ್ಸೆ ನೀಡುವುದಕ್ಕಾಗಿ ವೈದ್ಯರು ಮತ್ತು ದಾದಿಯರಿಗೆ ಔಷಧಿ ಹಾಗೂ ಬ್ಯಾಂಡೇಜ್‌ಗಳನ್ನು ಕೇಳಿದರು. ಅಲ್ಲದೆ ಅಚ್ಚರಿ ಎಂಬಂತೆ ಕೋತಿಯು ಜನರು ತನಗೆ ಚಿಕಿತ್ಸೆ ನೀಡುವ ವೇಳೆ ಯಾವ ಬಗೆಯಲ್ಲೂ ತೊಂದರೆ ಕೊಡದೆ ಚಿಕಿತ್ಸೆ ಪಡೆದುಕೊಂಡಿದೆ.
ಕೋತಿಯು ಇನ್ನೊಂದು ಕೋತಿಯೊಡನೆ ಕಾದಡಿದ್ದ ವೇಳೆ ಗಾಯವಾಗಿದೆ ಎನ್ನಲಾಗಿದ್ದು, ಸಾರ್ವಜನಿಕರೊಬ್ಬರು ಕೋತಿಯ ಗಾಯಕ್ಕೆ ಮುಲಾಮು ಹಚ್ಚಿದ್ದಾರೆ. ಪ್ರತ್ಯಕ್ಷದರ್ಶಿ ಮತ್ತು ದಾಂಡೇಲಿಯ ಸೈಕಲ್ ಅಂಗಡಿಯ ಮಾಲೀಕ ದಿನೇಶ್ ವ್ಯಾಸ್ ಪತ್ರಿಕೆಗೆ ಈ ಬಗ್ಗೆ ವಿವರ ನೀಡಿದ್ದಾರೆ. "ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಸ್ಪತ್ರೆಯ ಬಳಿ ಎರಡು ಕೋತಿಗಳು ಕಾಣಿಸಿದ್ದವು. ಅದರಲ್ಲಿ ಒಂದು ಗಾಯದ ಗುರುತುಗಳನ್ನು ಹೊಂದಿತ್ತು. ಗಾಯಗೊಂಡ ಕೋತಿ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಸಹಾಯಕ್ಕಾಗಿ ಎದುರುನೋಡುತ್ತಿತ್ತು. ಆದರೆ ಹಾಗೆ ಕುಳಿತಿದ್ದ ಕೋತಿ ಜನರಿಂದ ಬಾಳೆಹಣ್ಣು ಅಥವಾ ಇನ್ಯಾವುದೇ ಆಹಾರ ಸ್ವೀಕರಿಸಿಲ್ಲ. ಗಾಯದ ನೋವಿನಿಂದ ಏನನ್ನೂ ತಿನ್ನದಿರುವುದನ್ನು ನಾವು ಅರಿತೆವು.
ಶುಕ್ರವಾರ ಮಧ್ಯಾಹ್ನ ಪಾಟೀಲ್ ನರ್ಸಿಂಗ್ ಹೋಮ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆ ಆ ಸಮಯದಲ್ಲಿ ಮುಚ್ಚಿತ್ತು . ಶನಿವಾರ, ಕೆಲವು ಯುವಕರು ಔಷಧಿಗಳನ್ನು ಆಹಾರವನ್ನು ನೀಡಲು ಕೋತಿಗಾಗಿ ಹುಡುಕಿದ್ದಾರೆ. ಆದರೆ ಆ ಗಾಯಾಳು ಕೋತಿ ಮತ್ತೆ ಕಾಣಿಸಿಕೊಂಡಿಲ್ಲ”.